ಮಂಡ್ಯ: ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಮಗನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ನಡೆದಿತ್ತು. ಎನ್‌ಡಿಎ ಅಭ್ಯರ್ಥಿ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ನಡುವೆ ಭರ್ಜರಿ ಫೈಟ್ ಇತ್ತು. ಆದರೆ, ಕುಮಾರಸ್ವಾಮಿ ವಿರುದ್ಧ ಸ್ಟಾರ್ ಚಂದ್ರು ಮಂಡಿಯೂರಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದು ನಿಖಿಲ್ ವಿರುದ್ಧ ಭರ್ಜರಿ ಜಯಗಳಿಸಿದ್ದರು. ಈ ಬಾರಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಕುಮಾರಸ್ವಾಮಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ, ಪಟಾಕಿ ಸಿಡಿಸಬೇಡಿ ಎಂದು ಹೇಳಲಾಗಿದೆ. ಎಲ್ಲದಕ್ಕೂ ಮಂಡ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ.