ಬೆಂಗಳೂರು : ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಮಹತ್ವದ ಕ್ರಮ ಕೈಗೊಂಡಿದೆ. ಮಾರ್ಚ್ 18ರಿಂದ ರಾಜ್ಯಾದ್ಯಂತ ಒಟ್ಟು 2,000 ವಿಶೇಷ ಹೆಚ್ಚುವರಿ ಕೆಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೇಳಲಾಗಿದೆ. ಮಾರ್ಚ್ 18ರಿಂದ ಮಾರ್ಚ್ 20ರವರೆಗೆ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ ರಾಜ್ಯದ ಪ್ರಮುಖ ನಗರಗಳು ಹಾಗೂ ನೆರೆ ರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಮೊಗ್ಗ, ಹಾಸನ, ಧರ್ಮಸ್ಥಳ, ಮಂಗಳೂರು, ಶೃಂಗೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬಳ್ಳಾರಿ, ಕಲಬುರಗಿ ಹಾಗೂ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ನಗರಗಳಿಗೆ ಬಸ್ಗಳು ಲಭ್ಯವಿವೆ. ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಮಡಿಕೇರಿ ಹಾಗೂ ವಿರಾಜಪೇಟೆ ಮಾರ್ಗದ ಬಸ್ಗಳು ಇಲ್ಲಿಂದ ಕಾರ್ಯಾಚರಣೆ ನಡೆಸಲಿವೆ.
ಆಕರ್ಷಕ ರಿಯಾಯಿತಿ
ಪ್ರಯಾಣಿಕರನ್ನು ಪ್ರೋತ್ಸಾಹಿಸಲು ಕೆಎಸ್ಆರ್‌ಟಿಸಿ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ 5% ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ 10% ರಿಯಾಯಿತಿ ನೀಡಲಾಗುವುದು.
ಇದನ್ನೂ ಓದಿ : ಯೂಟ್ಯೂಬರ್ ಅನುರಾಗ್ ದೊಭಾಲ್ ಆರೋಗ್ಯ ಸ್ಥಿತಿ ಗಂಭೀರ!



















