ಚಿತ್ರದುರ್ಗ: ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುವಂತಹ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಬಸ್ ಚಾಲನೆ ಮಾಡುತ್ತಲೇ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಬಸ್‌ನಲ್ಲಿ ಭಾರೀ ರಶ್ ಇದ್ದರೂ ಚಾಲಕ ಒಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ಮಾತನಾಡುತ್ತಾ, ಮತ್ತೊಂದು ಕೈಯಲ್ಲಿ ಸ್ಟಿಯರಿಂಗ್ ಹಿಡಿದು ಬಸ್ ಚಲಾಯಿಸಿರುವುದು ಕಂಡುಬಂದಿದೆ.
ಭರಮಸಾಗರ ಮತ್ತು ಚಿತ್ರದುರ್ಗ ನಡುವೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಬಸ್ ಕೋಲಾರ ಜಿಲ್ಲೆಯ ಮುಳುಬಾಗಿಲು ಡಿಪೋಗೆ ಸೇರಿದ ಕೆಎ-07 ಎಫ್-1896 ಸಂಖ್ಯೆಯ ಬಸ್ ಎಂದು ಮಾಹಿತಿ ಲಭ್ಯವಾಗಿದೆ.
ಚಾಲಕನ ಈ ನಿರ್ಲಕ್ಷ್ಯ ವರ್ತನೆ ಗಮನಿಸಿದ್ದರೂ ಪ್ರಯಾಣಿಕರು ತಕ್ಷಣ ಪ್ರಶ್ನಿಸದೆ ಮೌನವಾಗಿದ್ದರೆಂದು ತಿಳಿದುಬಂದಿದೆ. ಬಳಿಕ ಕೆಲ ಪ್ರಯಾಣಿಕರು ಚಾಲಕನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ ಚಾಲನೆ ಮಾಡುವಾಗಲೇ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯಗಳನ್ನು ಪ್ರಯಾಣಿಕರು ವೀಡಿಯೋದಲ್ಲಿ ಸೆರೆಹಿಡಿದಿದ್ದು, ಅದು ಈಗ ವೈರಲ್ ಆಗಿದೆ. ಈ ಘಟನೆ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಳ್ಳಂಬೆಳಿಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ | ಮೂರಕ್ಕೂ ಹೆಚ್ಚು ಮನೆ ಮೇಲೆ ರೇಡ್



















