ಬೆಂಗಳೂರು: ರಾಜ್ಯ ಸರ್ಕಾರ (State Govt) ಗ್ಯಾರಂಟಿ ಯೋಜನೆ ಜಾರಿಗೆ ತಂದ ನಂತರದಿಂದ ಆರ್ಥಿಕ ಮುಗ್ಗಟ್ಟು ಹೆಚ್ಚು ಕಾಡುತ್ತಿದೆ ಎಂಬುವುದು ಸಾಬೀತಾಗುತ್ತಲೇ ಇದೆ. ಹೀಗಾಗಿ ಸಾಲದ ಪ್ರಮಾಣ ಏರಿಕೆಯಾಗುತ್ತಿವೆ ಎನ್ನಲಾಗುತ್ತಿದೆ. ಈಗ ಸಾರಿಗೆ ಸಂಸ್ಥೆ ಮತ್ತೆ ಸಾಲ ಮಾಡಲು ಮುಂದಾಗಿದೆ.
ಇತ್ತೀಚೆಗಷ್ಟೇ ಸಾರಿಗೆ ಸಂಸ್ಥೆ ಬಸ್ ಟಿಕೆಟ್ ದರ ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಪಿಎಫ್ ಹಣ ಹಾಗೂ ಇಂಧನ ಖರೀದಿಸಲು ಬ್ಯಾಂಕ್‌ಗಳಿಂದ 624 ಕೋಟಿ ರೂ. ಸಾಲ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಅಲ್ಲದೇ, ಹಿಂದಿನ ಬಾಕಿ ಪಾವತಿಸುವುದಕ್ಕಾಗಿ ಸಾಲದ ಮೊರೆ ಹೋಗಿದೆ.
ಹೀಗಾಗಿ 623.8 ಕೋಟಿ ರೂ. ಟರ್ಮ್ ಲೋನ್‌ಗಾಗಿ ಹಣಕಾಸು ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕ್ ಗಳಿಗೆ ಟೆಂಡರ್ ನಲ್ಲಿ ಭಾಗವಹಿಸುವಂತೆ ಸರ್ಕಾರ ಪ್ರಕಟಣೆ ಹೊರಡಿಸಿದೆ. ಸಾಲ ಮರುಪಾವತಿಗೆ 7 ವರ್ಷಗಳ ಅವಧಿ ಪಡೆದುಕೊಳ್ಳಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಡೀಸೆಲ್‌ಗೆ ಸಂಬಂಧಿಸಿದ ಬಾಕಿ ಹಣ ತೀರಿಸಲು 2 ಸಾವಿರ ಕೋಟಿ ರೂ. ಅಗತ್ಯವಿದೆ ಎನ್ನಲಾಗುತ್ತಿದೆ.
ಇದನ್ನು ವಿರೋಧಿಸಿರುವ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈಗ ಈ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಪೋಸ್ಟ್ ಸಮರ ನಡೆಯುತ್ತಿದೆ. ಸಾಲ ಪಡೆಯುತ್ತಿರುವುದನ್ನು ಬಿಜೆಪಿ ವಿರೋಧಿಸಿದ್ದಕ್ಕೆ ಕಾಂಗ್ರೆಸ್ ಬಿಜೆಪಿ ಬುರುಡೆ ಪಕ್ಷ ಎಂದು ಕೌಂಟರ್ ನೀಡಿದೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬುರುಡೆ ಬಿಜೆಪಿ ಪಕ್ಷದವರೇ. ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು. ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ 5900 ಕೋಟಿ ರೂಪಾಯಿ ಸಾಲ ತೀರಿಸಬೇಕಾದ ಅನಿವಾರ್ಯತೆ ಇದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ. ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿಜೆಪಿಯವರು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾಡಿದ ಸಾಲ 2 ಲಕ್ಷದ 30 ಸಾವಿರ ಕೋಟಿ ರೂ. ಅದರ ಬಗ್ಗೆ ಸ್ವಲ್ಪ ಗಮನಹರಿಸಿ ವಿಷಯ ಸಂಗ್ರಹಿಸಿ ಮಾತನಾಡಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.