ಕೋಲಾರ : ವೃದ್ದರೋರ್ವರನ್ನು ಭೀಕರವಾಗಿ ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ನಡೆದಿದೆ. ವೆಂಟಕರಾಮಪ್ಪ (70) ಮೃತ ದುರ್ದೈವಿಯಾಗಿದ್ದು, ಅನಾರೋಗ್ಯ ಪೀಡಿತ ವೃದ್ದ ಒಬ್ಬರೇ ಇದ್ದ ವೇಳೆ ಮನೆಗೆ ನುಗ್ಗಿ ಕೃತ್ಯ ಎಸಗಲಾಗಿದೆ.
ಪ್ರಕರಣ ಸಂಬಂಧ ತನಿಖೆಗೆ ನಡೆಸುತ್ತಿರುವ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮನೆಯಲ್ಲಿ ವೃದ್ದ ವೆಂಟಕರಾಮಪ್ಪ ಮತ್ತು ಅವರ ಪತ್ನಿ ಆನಂದಮ್ಮ ಇಬ್ಬರೇ ನೆಲೆಸಿದ್ದರು. ಅನಾರೋಗ್ಯದಿಂದ ವೆಂಟಕರಾಮಪ್ಪ ಬಳಲುತ್ತಿದ್ದ ಹಿನ್ನಲೆ ಅವರನ್ನು ಮನೆಯಲ್ಲಿ ಬಿಟ್ಟು, ಆನಂದಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು.
ಸಂಜೆ ವೇಳೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನ ಕಂಡಿದ್ದಾರೆ. ಆರಂಭದಲ್ಲಿ ಬಿಪಿ ಅಥವಾ ಶುಗರ್ ಕಾಯಿಲೆಯಿಂದ ಕುಸಿದು ಬಿದ್ದು ತಲೆಗೆ ಪೆಟ್ಟಾಗಿರಬೇಕು ಅಂದುಕೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಆದರೆ ಮನೆಯಲ್ಲಿನ ವಸ್ತುಗಳಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಎಲ್ಲ ಕಡೆ ಖಾರದ ಪುಡಿ ಚೆಲ್ಲಿರೋದು ಗಮನಕ್ಕೆ ಬಂದಿದೆ. ಜೊತೆಗೆ ಮನೆಯಲ್ಲಿದ್ದ ಹಣ ಮತ್ತು ಒಡೆವೆ ದರೋಡೆ ಆಗಿರುವ ಕಾರಣ ಇದು ಕೊಲೆ ಎಂಬುದು ಗೊತ್ತಾಗಿದೆ.
ಘಟನೆ ಬಗ್ಗೆ ಗ್ರಾಮಸ್ಥರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರೀಕ್ಷಿಸಿದಾಗ ತಲೆಗೆ ಹಿಟ್ಟಿನ ಕೋಲಿನಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ನಾಲ್ಕೈದು ಲಕ್ಷ ರೂ.ನಷ್ಟು ಹಣ, ಬೆಳ್ಳಿಯ ಸಾಮಗ್ರಿ ಹಾಗೂ ಸುಮಾರು 90 ಗ್ರಾಂನಷ್ಟು ಚಿನ್ನದ ಒಡವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳ ಬೇಟೆಗಾಗಿ ಎರಡು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.
ಇದನ್ನೂ ಓದಿ : ಡೆಲ್ಲಿಗೆ ತೆರಳಿದ ಡಿಕೆಶಿ ಬಣಕ್ಕೆ ನಿರಾಸೆ | ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಶಾಸಕರು ವಾಪಸ್



















