ಕೋಲಾರ: ನಾಪತ್ತೆಯಾಗಿದ್ದ ಕೃಷಿ ಇಲಾಖೆ ಅಧಿಕಾರಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಯಲ್ದೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಘು (40) ಎಂದು ಗುರುತಿಸಲಾಗಿದೆ. ಅವರು ಯಲ್ದೂರು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಎಂದಿನಂತೆ ಕೆಲಸಕ್ಕೆ ಹಾಜರಾದ ರಘು ಅವರು ಸಂಜೆ ಮನೆಗೆ ವಾಪಸ್ ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ನಂತರ ಭಾನುವಾರ ಸಂಜೆ ಯಲ್ದೂರು ಸಮೀಪದ ಮಾವಿನ ತೋಟವೊಂದರಲ್ಲಿ ಅವರ ಶವ ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ರಘು ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಈ ದುರ್ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಕಾರು- ಬೊಲೆರೊ ನಡುವೆ ಭೀಕರ ಅಪಘಾತ | ನಾಲ್ವರಿಗೆ ಗಾಯ



















