ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಬಳಿ ನಡೆದ ಬೈಕ್ ಅಪಘಾತದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಕೊಂಡರಾಜನಹಳ್ಳಿ ನಿವಾಸಿ ಕ್ರಿಸ್ಟಿಯಾನಾ (32) ಎಂದು ಗುರುತಿಸಲಾಗಿದೆ. ಅವರು ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಬಂಗಾರಪೇಟೆಯಲ್ಲಿ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುವ ವೇಳೆ, ಕೋಲಾರ–ಬಂಗಾರಪೇಟೆ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ಚಲಿಸುವಾಗ ಆಯತಪ್ಪಿ ಬಿದ್ದಿದ್ದಾರೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ಕ್ರಿಸ್ಟಿಯಾನಾ ಅವರನ್ನು ತಕ್ಷಣ ಕೋಲಾರದ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮಂಗಳೂರಲ್ಲಿ ಭೀಕರ ಅಪಘಾತ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!



















