ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ದರ್ಶನ್ ಗೆ ಕೊನೆಗೂ ಬೇಲ್ ಸಿಕ್ಕಿದೆ. ಕಳೆದ 5 ತಿಂಗಳಿನಿಂದ ಜೈಲು ಸೇರಿರುವ ದರ್ಶನ್ ಗೆ ದೀಪಾವಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ದರ್ಶನ್ ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ನ್ಯಾಯಾಲಯ ಆದೇಶ ಹೊರಡಿಸಿದೆ.
ಹಿಂದೆ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ನಲ್ಲಿ ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ದರ್ಶನ್ ಗೆ ತೀವ್ರ ಬೆನ್ನುನೋವಿನ ಸಮಸ್ಯೆ ಇದ್ದು, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಒಂದೊಮ್ಮೆ ಚಿಕಿತ್ಸೆ ತಡವಾದರೆ ಅವರು ಪಾರ್ಶ್ವವಾಯುವಿಗೆ ಈಡಾಗುವ ಆತಂಕ ಇದೆ. ಹೀಗಾಗಿ ವೈದ್ಯರು ನೀಡಿದ ವರದಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ದರ್ಶನ್ರ ಆರೋಗ್ಯ ಸಮಸ್ಯೆಯ ಕುರಿತು ವರದಿ ನೀಡಲು ಮೆಡಿಕಲ್ ಬೋರ್ಡ್ ಸ್ಥಾಪನೆ ಮಾಡಬೇಕೆಂಬ ವಾದ ಮಂಡಿಸಿದ್ದರು. ಈಗ ಸಲ್ಲಿಸಲಾಗಿರುವ ವೈದ್ಯ ವರದಿಯಲ್ಲಿ ದರ್ಶನ್ಗೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಗುಣವಾಗಲು ತೆಗೆದುಕೊಳ್ಳುವ ಸಮಯ ನಿಖರವಾಗಿಲ್ಲವೆಂದು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್, ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು ಎಂದು ಉಲ್ಲೇಖಿಸಿ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ಪಾಸ್ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೇ, ವಾರದೊಳಗೆ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ.