ಟೀಮ್ ಇಂಡಿಯಾದ ‘ರನ್ ಮಷಿನ್’ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಪ್ರದರ್ಶನದೊಂದಿಗೆ ಅವರು, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ20) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಬಹುದೊಡ್ಡ ವಿಶ್ವ ದಾಖಲೆಯನ್ನು ಮುರಿದು, ಅಗ್ರಸ್ಥಾನಕ್ಕೇರಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನ ಹೊಸ ಕಿಂಗ್
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ಸಿಡ್ನಿಯಲ್ಲಿ ತಮ್ಮ ಹಳೆಯ ಖದರ್ ಪ್ರದರ್ಶಿಸಿದರು. 81 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸಿದ ಅವರು, ಈ ಇನಿಂಗ್ಸ್‌ನ ಮೂಲಕ ವೈಟ್ ಬಾಲ್ ಕ್ರಿಕೆಟ್‌ನಲ್ಲಿ (ODI + T20I) ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.
ಪಂದ್ಯಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 18,436 ರನ್ ಗಳಿಸಿದ್ದರೆ, ಕೊಹ್ಲಿ ಇದೀಗ 18,443 ರನ್ ಕಲೆಹಾಕಿ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ವೈಟ್ ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು:
- ವಿರಾಟ್ ಕೊಹ್ಲಿ: 18,443 ರನ್
- ಸಚಿನ್ ತೆಂಡೂಲ್ಕರ್: 18,436 ರನ್
- ಕುಮಾರ್ ಸಂಗಕ್ಕಾರ: 15,616 ರನ್
- ರೋಹಿತ್ ಶರ್ಮಾ: 15,528 ರನ್
- ಮಹೇಲಾ ಜಯವರ್ದನೆ: 14,133 ರನ್
ಸಂಗಕ್ಕಾರ ದಾಖಲೆಯೂ ಉಡೀಸ್
ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದರು. ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ (18,426) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ಈಗ 14,255 ರನ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ. ಸಂಗಕ್ಕಾರ 14,234 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಕ್ಲೀನ್ ಸ್ವೀಪ್ ಮುಜುಗರದಿಂದ ಪಾರು
ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಭಾರತಕ್ಕೆ ಕ್ಲೀನ್ ಸ್ವೀಪ್ ಆಗುವ ಭೀತಿ ಎದುರಾಗಿತ್ತು. ಆದರೆ, ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ (ಅಜೇಯ 121) ಮತ್ತು ವಿರಾಟ್ ಕೊಹ್ಲಿ (ಅಜೇಯ 74) ಅವರ 168 ರನ್‌ಗಳ ಮುರಿಯದ ಜೊತೆಯಾಟದ ನೆರವಿನಿಂದ ಭಾರತ, ಆಸ್ಟ್ರೇಲಿಯಾ ನೀಡಿದ್ದ 237 ರನ್‌ಗಳ ಗುರಿಯನ್ನು ಕೇವಲ 1 ವಿಕೆಟ್ ನಷ್ಟಕ್ಕೆ 38.3 ಓವರ್‌ಗಳಲ್ಲಿ ತಲುಪಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ವೈಟ್‌ವಾಶ್ ಮುಜುಗರದಿಂದ ಪಾರಾಯಿತು.



















