ಬೆಂಗಳೂರು : ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಗೊಂದಲ ಸೃಷ್ಠಿಯಾಗಿದೆ. ಒತ್ತುವರಿ ತೆರವುಗೊಂಡ ಬಳಿಕ 26 ನಿರಾಶ್ರಿತ ಫಲಾನುಭವಿಗಳಿಗೆ ಇನ್ನೂ ಗೃಹ ಭಾಗ್ಯ ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಈಗಾಗಲೇ 26 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಬೆಂಗಳೂರು ಉತ್ತರ ನಗರಪಾಲಿಕೆ, ಆ ಪಟ್ಟಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ರವಾನಿಸಿದೆ. ಆದರೆ, ಈ 26 ನಿರಾಶ್ರಿತರ ದೃಢೀಕರಣ ಪತ್ರವು ತಹಶೀಲ್ದಾರ್‌ಗೆ ಇನ್ನೂ ಲಭ್ಯವಾಗಿಲ್ಲ.ಹೀಗಾಗಿ ದೃಢೀಕರಣ ಪತ್ರವಿಲ್ಲದೆ ನಿವೇಶನ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಇತ್ತ, ನಿರಾಶ್ರಿತರು ನಾವು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ನಿಯಮದ ಪ್ರಕಾರ ಸರ್ಕಾರಿ ಜಾಗದಲ್ಲಿ 94ಸಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಸರ್ಕಾರಿ ಜಾಗದಲ್ಲಿ ಇದ್ದು, 94ಸಿ ಅರ್ಜಿ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಿಬಿಎ ಅಧಿಕಾರಿಗಳಿಂದ ಪಟ್ಟಿ ಬಂದ ತಕ್ಷಣ ವಾಸ್ತವಾಂಶ ಅರಿಯಲು ತಹಶೀಲ್ದಾರ್ ಮುಂದಾಗಿದ್ದಾರೆ. ಪೊಲೀಸರ ಜೊತೆಗೂಡಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.ಈ ವೇಳೆ ನಿರಾಶ್ರಿತರ ದೃಢೀಕರಣ ಪತ್ರಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅದೇ ವೇಳೆ ನಿರಾಶ್ರಿತರ ಪೂರ್ವಾಪರತೆ ಪರಿಶೀಲನೆ ಮಾಡುವಂತೆ ತಹಶೀಲ್ದಾರ್ ಮನವಿ ಮಾಡಿದ್ದಾರೆ.
ಇನ್ನೂ ಪೊಲೀಸ್ ತನಿಖೆ ಚುರುಕಾಗುತ್ತಿದ್ದಂತೆ ಕೋಗಿಲು ಲೇಔಟ್ ಖಾಲಿ ಖಾಲಿಯಾಗುತ್ತಿದೆ. ವಲಸೆ ಬಂದಿದ್ದ ಹತ್ತಾರು ಕುಟುಂಬಗಳು ಏಕಾಏಕಿ ಅಲ್ಲಿಂದ ತೆರಳಿವೆ. ಯುಪಿ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದ ಬಂದಿದ್ದ ವಲಸೆ ಕುಟುಂಬಗಳು ಕೋಗಿಲು ಲೇಔಟ್‌ನಲ್ಲಿ ಅಕ್ರಮ ಒತ್ತುವರಿದಾರರಾಗಿದ್ದರೆಂಬ ಶಂಕೆ ವ್ಯಕ್ತವಾಗಿದೆ.
ಕೋಗಿಲು ಲೇಔಟ್‌ನ ಫಕೀರ್ ಬಡಾವಣೆಯ ಕೆಳಭಾಗದಲ್ಲಿ ವಾಸವಾಗಿದ್ದ ಹೊರ ರಾಜ್ಯದ ಕುಟುಂಬಗಳು, ಈ ಹಿಂದೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದು ಹೇಳಿಕೊಂಡಿದ್ದವು ಆದರೆ ಪೊಲೀಸ್ ತನಿಖೆ ಚುರುಕಾದಂತೆ ಈ ಕುಟುಂಬಗಳು ದಿಢೀರ್ ನಾಪತ್ತೆಯಾಗಿವೆ.
ಇದನ್ನೂ ಓದಿ : ಜಿಬಿಎ ವ್ಯಾಪ್ತಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಅಭಿಯಾನ ಆರಂಭ!


















