ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ಭಿನ್ನಮತದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳಲ್ಲಿ ಭಿನ್ನಮತ, ಬಂಡಾಯ ಜೋರಾಗಿದೆ. ಇದರ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಮರ ಸಾರಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ಅವರು ಸಚಿವ ಸ್ಥಾನ ಬಿಟ್ಟುಕೊಡುವ ಸುಳಿವು ನೀಡಿದ್ದಾರೆ. ಇದು ಈಗ ಸಂಚಲನ ಮೂಡಿಸಿದೆ.
ಲೋಕಸಭೆ ಚುನಾವಣೆಗೆ ಮಾತ್ರವೇ ಡಿ.ಕೆ. ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ ಎಂದು ಹೈಕಮಾಂಡ್ ಹೇಳಿತ್ತು. ನಾವೇನೂ ಡಿಕೆಶಿ ಅವರು ಕೆಪಿಸಿಸಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸುತ್ತಿಲ್ಲ. ಹೈಕಮಾಂಡ್ ಹೇಳಿದ ಕಾರಣ ಕೇಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗೊಂದಲ ಎದುರಾಗಬಾರದು ಎಂದು ಕೇಳುತ್ತಿದ್ದೇವೆ. ಹೈಕಮಾಂಡ್ ನಾಯಕರು ಹೇಳಿದರೆ ನಾನು ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಬೇಕು ಎಂಬುದಾಗಿ ಪತ್ರ ಬರೆದಿದ್ದಾರೆ. ಈ ಕುರಿತು ಅವರೇ ಹೇಳಿಕೆ ನೀಡಿದ್ದಾರೆ. ಇದು ಕೂಡ ಬಂಡಾಯದ ಸಂಕೇತವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಕೆ.ಎನ್.ರಾಜಣ್ಣ ಹಾಗೂ ಡಿಕೆಶಿ ನಡುವೆ ಹಲವು ತಿಂಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಡಿಸಿಎಂ ಸ್ಥಾನವನ್ನು ಒಬ್ಬರಿಗೇ ಏಕೆ? ಹೆಚ್ಚಿನ ಜನರಿಗೆ ನೀಡಬೇಕು ಎಂದು ಮೊದಲು ಕೆ.ಎನ್.ರಾಜಣ್ಣ ಪ್ರತಿಪಾದಿಸಿದ್ದರು. ಈಗ ಮೈಸೂರಿನ ಉದಯಗಿರಿ ಗಲಭೆಯ ಪ್ರಕರಣದಲ್ಲಿ ರಾಜಣ್ಣ ಅವರು ಪೊಲೀಸರ ನಡೆಯನ್ನು ಟೀಕಿಸಿದರೆ, ಡಿಕೆಶಿ ಅವರು ಪೊಲೀಸರ ಬೆಂಬಲಕ್ಕೆ ನಿಂತರು. ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಯಾವ ತಿರುವು ಪಡೆಯಲಿದೆ ಎಂಬುದು ಮಾತ್ರ ಊಹೆಗೆ ನಿಲುಕದಂತಾಗಿದೆ.