ಬೆಂಗಳೂರು: ಮಧ್ಯಪ್ರಾಚ್ಯದ ಯುದ್ದದ ಪರಿಣಾಮ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಕೊರತೆ ಇದೀಗ ಕರ್ನಾಟಕದ ಹಾಲು ವಲಯಕ್ಕೂ ತಟ್ಟಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕೆಎಂಎಫ್ ಉತ್ಪಾದನಾ ಘಟಕಗಳು ಗ್ಯಾಸ್ ಸರಬರಾಜಿನ ವ್ಯತ್ಯಯದಿಂದ ಒತ್ತಡಕ್ಕೆ ಸಿಲುಕಿವೆ.
ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಕೆಎಂಎಫ್ ಉತ್ಪಾದನಾ ಘಟಕಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಸಂಸ್ಥೆಗೆ ಇದೀಗ ತೀವ್ರ ಅಭಾವ ಎದುರಾಗಿದೆ.
ಅಧಿಕಾರಿಗಳ ಪ್ರಕಾರ, ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ. ಪೂರೈಕೆ ಶೀಘ್ರದಲ್ಲೇ ಪುನರಾರಂಭವಾಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಸಿಹಿ ಹಾಗೂ ಖಾರದ ತಿಂಡಿಗಳು ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಸೀಮಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಕೆಎಂಎಫ್ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿದ್ದು, ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ. ವಾರ್ಷಿಕ ವಹಿವಾಟು ಸುಮಾರು 25,000 ರಿಂದ 30,000 ಕೋಟಿ ರೂಪಾಯಿಗಳವರೆಗೆ ಇದೆ. ಪ್ರತಿದಿನ ಸರಾಸರಿ 85 ರಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ 40 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲು ಮಾರಾಟವಾಗುತ್ತದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ.
ಕರ್ನಾಟಕವಷ್ಟೇ ಅಲ್ಲದೆ ತಮಿಳುನಾಡು, ಆಂಧ್ರೆಪ್ರದೇಶ್, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲೂ ಕೆಎಂಎಫ್ ಬಲವಾದ ಮಾರುಕಟ್ಟೆ ಹೊಂದಿದೆ. ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ಯುಗಾದಿ ಹಾಗೂ ದೀಪಾವಳಿ ಹಬ್ಬಗಳ ಸಮಯದಲ್ಲಿ ಸಿಹಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗುವ ಹಿನ್ನೆಲೆ, ಪ್ರಸ್ತುತ ಗ್ಯಾಸ್ ಕೊರತೆ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಇದನ್ನೂ ಓದಿ : ಪೆಟ್ರೋಲ್, ಡಿಸೇಲ್ ಕೊರತೆ ವದಂತಿ : ಬಂಕ್‌ಗೆ ಮುಗಿಬಿದ್ದ ಜನ


















