ವಡೋದರ : ಟೀಮ್ ಇಂಡಿಯಾದಲ್ಲಿ ಆರಂಭಿಕ ಆಟಗಾರನಾಗಿ ವೃತ್ತಿಜೀವನ ಆರಂಭಿಸಿದ ಕನ್ನಡಿಗ ಕೆ.ಎಲ್. ರಾಹುಲ್ (KL Rahul), ಇದೀಗ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಮಾರ್ಪಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ರಾಹುಲ್, 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಹಿಂದಿರುವ ಒತ್ತಡ ಮತ್ತು ವಿಶೇಷತೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಭಾನುವಾರ ವಡೋದರದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡ ದಿಢೀರ್ ಕುಸಿತ ಕಂಡಾಗ, ರಾಹುಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಹರ್ಷಿತ್ ರಾಣಾ ಜೊತೆಗೂಡಿ 37 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದ ಅವರು, ಕೇವಲ 21 ಎಸೆತಗಳಲ್ಲಿ 29 ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಓಪನಿಂಗ್‌ಗಿಂತ 6ನೇ ಕ್ರಮಾಂಕವೇ ಕಷ್ಟ!
ಪಂದ್ಯದ ಬಳಿಕ ಮಾತನಾಡಿದ ರಾಹುಲ್, ಆರಂಭಿಕನಿಗೂ ಮತ್ತು ಫಿನಿಶರ್‌ಗೂ ಇರುವ ವ್ಯತ್ಯಾಸವನ್ನು ವಿವರಿಸಿದರು. “ನಾನು ಆರಂಭಿಕನಾಗಿ ಕಣಕ್ಕಿಳಿದಾಗ ಮೈದಾನದಲ್ಲಿ ಫೀಲ್ಡರ್‌ಗಳೇ ಕಾಣಿಸುತ್ತಿರಲಿಲ್ಲ (ಎಲ್ಲರೂ ಒಳವೃತ್ತದೊಳಗೆ ಇರುತ್ತಿದ್ದರು). ಆದರೆ 6ನೇ ಕ್ರಮಾಂಕದಲ್ಲಿ ಬರುವಾಗ 5 ಫೀಲ್ಡರ್‌ಗಳು ಬೌಂಡರಿ ಗೆರೆಯ ಮೇಲಿರುತ್ತಾರೆ. ಬಂದ ತಕ್ಷಣವೇ ದೊಡ್ಡ ಹೊಡೆತಗಳಿಗೆ ಕೈಹಾಕುವ ಒತ್ತಡವಿರುತ್ತದೆ. ಇಲ್ಲಿ ಮಾಡುವ ಒಂದು ಸಣ್ಣ ತಪ್ಪೂ ಕೂಡ ಪಂದ್ಯದ ಫಲಿತಾಂಶವನ್ನೇ ಬದಲಿಸಿ, ಸೋಲಿಗೆ ಕಾರಣವಾಗಬಹುದು,” ಎಂದು ರಾಹುಲ್ ವಿಶ್ಲೇಷಿಸಿದರು.
ಒತ್ತಡದಲ್ಲೇ ಅರಳುವ ಪ್ರತಿಭೆ
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, 5 ಅಥವಾ 6ನೇ ಕ್ರಮಾಂಕದ ಬ್ಯಾಟಿಂಗ್ ನನ್ನ ಆಟವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ನೆರವಾಗಿದೆ. ಇಲ್ಲಿ ಸ್ಕೋರ್ ಬೋರ್ಡ್ ನೋಡಿಕೊಂಡು, ಅದಕ್ಕೆ ತಕ್ಕಂತೆ ಆಡುವ ಸವಾಲಿರುತ್ತದೆ. ಒತ್ತಡದ ಸನ್ನಿವೇಶಗಳಲ್ಲಿ ತಂಡವನ್ನು ಗೆಲ್ಲಿಸಿಕೊಡುವುದರಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ಅಂತಿಮವಾಗಿ ನನಗೆ ಬೇಕಿರುವುದು ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶವಷ್ಟೇ, ಯಾವುದೇ ಕ್ರಮಾಂಕವಾದರೂ ಸೈ,” ಎಂದು ರಾಹುಲ್ ತಂಡದ ಮೇಲಿನ ಬದ್ಧತೆ ಪ್ರದರ್ಶಿಸಿದರು.
ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೆಲವೊಮ್ಮೆ ವಾಷಿಂಗ್ಟನ್ ಸುಂದರ್ ಅವರಿಗಿಂತ ಕೆಳಗೆ (6ನೇ ಕ್ರಮಾಂಕದಲ್ಲಿ) ಆಡುತ್ತಿರುವ ರಾಹುಲ್, ಅಲ್ಲಿಯೂ ಸರಾಸರಿ 47.42 ರನ್ ಕಾಯ್ದುಕೊಂಡಿರುವುದು ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿ.
ಇದನ್ನೂ ಓದಿ : ಕಿಚ್ಚನ ಚಪ್ಪಾಳೆ ವಿವಾದ | ಮಾಜಿ ಬಿಗ್‌ಬಾಸ್ ಸ್ಪರ್ಧಿ ರಜತ್ ಹೇಳಿದ್ದೇನು?



















