ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ಕೀಪರ್ ಬ್ಯಾಟರ್ ಕೆ. ಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸುವ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ನಿರ್ಧಾರವನ್ನು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಟೀಕಿಸಿದ್ದಾರೆ. ಸರಣಿಯಲ್ಲಿ ರಾಹುಲ್ ಅವರಿಗೆ ರಿಷಭ್ ಪಂತ್‌ಗೆ ಬದಲಾಗಿ ಅವಕಾಶ ನೀಡಿದ್ದರೂ ಸೂಕ್ತ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಬೌಲಿಂಗ್ ಆಲ್‌ರೌಂಡರ್ ಅಕ್ಷರ್ ಪಟೇಲ್ಗೆ 5ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಇದರಿಂದಾಗಿ ರಾಹುಲ್ ತಮ್ಮ ನೈಜ ಸ್ಥಾನ ಕಳೆದುಕೊಂಡರು. ಕಳೆದ ವರ್ಷವೂ ರಾಹುಲ್ ಅವರನ್ನು ಕೆಳಗೆ ಸರಿಸಿ, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರನ್ನು ಕಳುಹಿಸುತ್ತಿದ್ದರು. ಇದರಿಂದ ಎಡ, ಬಲಗೈ ಬ್ಯಾಟಿಂಗ್ ಸಮತೋಲನ ಸಾಧಿಸಲಾಗುತ್ತಿದ್ದರೂ ರಾಹುಲ್ಗೆ ನೇರವಾಗಿ ಅನ್ಯಾಯವಾಗುತ್ತಿದೆ.
ಶ್ರೀಕಾಂತ್ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಕ್ರಿಕೆಟಿಗ. ಹೀಗಾಗಿ ರಾಹುಲ್‌ಗೆ ನೀಡಲಾಗುತ್ತಿರುವ ಅಸಮಾನ್ಯ ಕ್ರಮಾಂಕವನ್ನು ತೀವ್ರವಾಗಿ ಟೀಕಿಸಿದ್ದಾರೆ, ಐದನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಆಡಿಸದೇ ಇರುವುದು ಸರಿಯಲ್ಲ ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತದ ಪರ ಒಳ್ಳೆಯ ಸಂಗತಿ. ಆದರೆ ಕೆಎಲ್ ರಾಹುಲ್ ವಿಚಾರದಲ್ಲಿ ಬೇಸರವಾಗಿದೆ. ಇದು ತುಂಬಾ ದುರದೃಷ್ಟಕರ. ಅಕ್ಷರ್ ಪಟೇಲ್ 30-40 ರನ್ ಮಾಡುತ್ತಿದ್ದಾರೆ. ಆದರೆ ರಾಹುಲ್ಗೆ ಮಾಡುತ್ತಿರುವುದು ಅನ್ಯಾಯ. ಅವರ ದಾಖಲೆಯನ್ನು ನೋಡಿದರೆ ಐದನೇ ಕ್ರಮಾಂಕದಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್ ಬಗ್ಗೆ ಏನನ್ನು ಯೋಚಿಸುತ್ತಿದೆ ಎಂಬುದೇ ನನಗೆ ತಿಳಿಯದು. ರಾಹುಲ್ 6 ಅಥವಾ 7ನೇ ಕ್ರಮಾಂಕದಲ್ಲಿಬಂದರೆ, ಆರು ಅಥವಾ ಏಳು ರನ್‌ಗಳಷ್ಟೇ ಮಾಡಬಹುದು. ಇದು ನ್ಯಾಯೋಚಿತವಲ್ಲ ಎಂದು ಶ್ರೀಕಾಂತ್ ತಮ್ಮ YouTube ಚಾನೆಲ್‌ನಲ್ಲಿ ಹೇಳಿದ್ದಾರೆ.
ಅಕ್ಷರ್ ಪಟೇಲ್, ಅವರನ್ನು ಐದನೇ ಕ್ರಮಾಂಕಕ್ಕೆ ಬಡ್ತಿ ನೀಡಿದ ನಂತರ ಉತ್ತಮ ಪ್ರದರ್ಶನ ನೀಡಿದ್ದಾರೆ. 52 ಮತ್ತು 41 ರನ್ ಗಳಿಸಿ ತಮ್ಮ ಸ್ಥಾನಕ್ಕೆ ನ್ಯಾಯ ನೀಡಿದ್ದಾರೆ. ಆದರೆ ರಾಹುಲ್ ಅವರನ್ನು ಕೆಳಗಿನ ಕ್ರಮಾಂಕಕ್ಕೆ ಕಳಿಸುವ ತಂತ್ರ ಫಲಿಸಿಲ್ಲ, ಅವರು 2 ಮತ್ತು 10 ರನ್ ಮಾತ್ರ ಗಳಿಸಿದ್ದಾರೆ.
ರಾಹುಲ್ ಅವರನ್ನು 6ನೇ ಕ್ರಮಾಂಕಕ್ಕೆ ಹಾಕಿ ಎಡ ಮತ್ತು ಬಲಗೈ ಬ್ಯಾಟಿಂಗ್ ಸಮತೋಲನ ಸಾಧಿಸಲು ಪ್ರಯತ್ನಿಸುವ ಗಂಭೀರ್ ತಂತ್ರವನ್ನು ಶ್ರೀಕಾಂತ್ ಟೀಕಿಸಿದರು. ಇದು ಪ್ರಮುಖ ಪಂದ್ಯದಲ್ಲಿ ಅಪಾಯಕಾರಿ ಎಂದು ಎಚ್ಚರಿಸಿದರು.
ಗಂಭೀರ್, ನೀವು ಮಾಡುತ್ತಿರುವುದು ಸರಿಯಲ್ಲ. ಹೌದು, ಪರಿಸ್ಥಿತಿ ಅವಲಂಬಿಸಿ ಅಕ್ಷರ್ ಅವರನ್ನು 5ನೇ ಕ್ರಮಾಂಕಕ್ಕೆ ಕಳುಹಿಸಬಹುದು, ಆದರೆ ಇದು ಸ್ಥಿರ ತಂತ್ರವಲ್ಲ. ನೀವು ಈ ಬದಲಾವಣೆಗಳನ್ನು ತೀವ್ರವಾಗಿ ಮಾಡುತ್ತಾ ಹೋದರೆ, ಒಂದು ದೊಡ್ಡ ಪಂದ್ಯದಲ್ಲಿ ಇದು ಅಪಾಯಕಾರಿಯಾಗಬಹುದು. ಟಾಪ್ 4 ಬ್ಯಾಟ್ಸ್‌ಮನ್‌ಗಳಿಗೆ ಎಡ ಮತ್ತು ಬಲಗೈ ಬ್ಯಾಟಿಂಗ್ ಸಮತೋಲನ ಅನಿವಾರ್ಯವಿಲ್ಲವೇ? ಅದು ಅನಿವಾರ್ಯವಾಗುವುದು ಐದನೇ ಕ್ರಮಾಂಕದಲ್ಲಾ? ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ರಿಷಭ್ ಬಳಸಿ
ಗಂಭೀರ್ ಅವರಿಗೆ ರಾಹುಲ್ ಅವರನ್ನು ಕೆಳ ಕ್ರಮಾಂಕಕ್ಕೆ ಇಳಿಸಲು ಬಯಸಿದರೆ, 6ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಿಸಬೇಕು. ಇದರಿಂದ ರಾಹುಲ್ ಅವರ ಆತ್ಮವಿಶ್ವಾಸ ಕುಸಿಯುವುದನ್ನು ತಪ್ಪಿಸಬಹುದು ಎಂದು ಶ್ರೀಕಾಂತ್ ಹೇಳಿದ್ದಾರೆ.
ನನಗೆ ಅಕ್ಷರ್ ಪಟೇಲ್ ಬಗ್ಗೆ ಯಾವುದೇ ತಕರಾರು ಇಲ್ಲ. ಅವರು ತಮ್ಮ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಆದರೆ ನೀವು ರಾಹುಲ್ ಅವರನ್ನು ಕೆಳಗೆ ಸರಿಸುತ್ತಿದ್ದರೆ, 6ನೇ ಕ್ರಮಾಂಕದಲ್ಲಿ ಪಂತ್ ಗೆ ಅವಕಾಶ ಕೊಡಿ. ರಾಹುಲ್ ಅವರ ಆತ್ಮವಿಶ್ವಾಸಕ್ಕೆ ಹಾನಿ ಮಾಡುವುದು ಏಕೆ? ಜಾಗತಿಕ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರನಿಗೆ ಇದು ನ್ಯಾಯೋಚಿತವೇ?ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ಈಗ ರಿಷಭ್ ಪಂತ್ ಅನ್ನು ಕೂಡಾ ಬೆಂಚ್ನಲ್ಲಿ ಕೂರಿಸಿದ್ದೀರಿ. ಇವರಲ್ಲಿ ಒಬ್ಬರು ಆಡಲೇ ಬೇಕು ನನಗೆ ಎನಿಸುತ್ತಿದೆ. ಪಂತ್ ಮೂರನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲೂ ಅವಕಾಶ ಪಡೆಯಲಿದ್ದಾರೆ. ರಾಹುಲ್ ಮತ್ತೊಮ್ಮೆ ಬೆಂಚ್ ಕಾಯಬೇಕಾಗುತ್ತದೆ. ನಿಮ್ಮ ಟೀಮ್‌ನ ಅತ್ಯುತ್ತಮ ಆಟಗಾರನನ್ನು ಐದನೇ ಕ್ರಮಾಂಕದಲ್ಲಿ ಆಡುವಂತೆ ಮಾಡಲೇಬೇಕು. ಅದು ಎಡಗೈ ಬ್ಯಾಟರ್ ಆಗಿದ್ದರೂ, ಬಲಗೈ ಆಟಗಾರನಾಗಿದ್ದರೂ ಪರವಾಗಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.
ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ಫೆಬ್ರವರಿ 12ರಂದು ನಡೆಯಲಿದ್ದು, ಭಾರತ ಈಗಾಗಲೇ 2-0 ಮುನ್ನಡೆಯಲ್ಲಿದೆ.