ಬೆಂಗಳೂರು: ಭಾರತದ ಪ್ರಮುಖ ನಗರ ಮೂಲದ ಮೋಟಾರ್‌ಸ್ಪೋರ್ಟ್ ಲೀಗ್, ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF), ಈಗ ಹೊಸ ರೋಮಾಂಚಕ ಹಂತಕ್ಕೆ ಕಾಲಿಟ್ಟಿದೆ. ಕನ್ನಡದ ಮೆಗಾಸ್ಟಾರ್ ಕಿಚ್ಚ ಸುದೀಪ್ ಅವರು ಬೆಂಗಳೂರು ಫ್ರಾಂಚೈಸಿ ತಂಡವನ್ನು ಅಧಿಕೃತವಾಗಿ ಖರೀದಿಸಿದ್ದು, ತಮ್ಮ ರೇಸಿಂಗ್ ತಂಡವಾದ ‘ಕಿಚ್ಚಸ್ ಕಿಂಗ್ಸ್ ಬೆಂಗಳೂರು (KKB)’ ಎಂದು ಕರೆದಿದ್ದಾರೆ. .
ಸುದೀಪ್ ಅವರ ಈ ಹೆಜ್ಜೆ ಸಿನಿಮಾ ಲೋಕಕ್ಕೂ ಮತ್ತು ವೇಗದ ರೇಸಿಂಗ್ ಟ್ರ್ಯಾಕ್‌ಗೂ ನಡುವೆ ಒಂದು ಮಹತ್ವದ ಸೇತುವೆಯಾಗಿದೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಟರೊಬ್ಬರ ವರ್ಚಸ್ಸು ಈಗ ಮೋಟಾರ್‌ಸ್ಪೋರ್ಟ್ ಜಗತ್ತಿಗೆ ಕಾಲಿಟ್ಟಿದೆ. ತೆರೆಯ ಮೇಲೆ ತಮ್ಮ ಅಪ್ರತಿಮ ಅಸ್ತಿತ್ವವನ್ನು ಹೊಂದಿರುವ ಸುದೀಪ್, ಇನ್ನು ಮುಂದೆ ತಂಡದ ಮಾಲೀಕರಾಗಿ ಮತ್ತು ಕ್ರೀಡಾ ರಾಯಭಾರಿಯಾಗಿ ಗುರುತಿಸಿಕೊಳ್ಳಲಿದ್ದಾರೆ. ಕರ್ನಾಟಕದಿಂದ ರಾಷ್ಟ್ರೀಯ ಮಟ್ಟದಲ್ಲಿ ರೇಸಿಂಗ್‌ನ ಹೊಸ ಯುಗವನ್ನು ಮುನ್ನಡೆಸುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025: ರೇಸಿಂಗ್ ಹೊಸ ಅಧ್ಯಾಯ
ಇಂಡಿಯನ್ ರೇಸಿಂಗ್ ಫೆಸ್ಟಿಅವಲ್ 2025 ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳ ಫ್ರಾಂಚೈಸಿ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ನಗರಗಳ ಬೀದಿ ಸರ್ಕ್ಯೂಟ್‌ಗಳು ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್‌ಗಳಲ್ಲಿ ಈ ರೇಸ್‌ಗಳು ನಡೆಯಲಿವೆ. ಈ ಲೀಗ್, ಭಾರತದ ಮೊದಲ ನಿಜವಾದ ಕ್ರೀಡಾ-ಮನರಂಜನಾ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ಈ ವರ್ಷದ ಋತುವು ಇಲ್ಲಿಯವರೆಗಿನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರಾದೇಶಿಕ ಅಭಿಮಾನಿಗಳನ್ನು ತಲುಪಲು, ಸೆಲೆಬ್ರಿಟಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಒತ್ತು ನೀಡಲಾಗಿದೆ.
ನಟ ಸುದೀಪ್: ರೇಸಿಂಗ್ ಒಂದು ಭಾವನೆ
ತಮ್ಮ ಹೊಸ ತಂಡದ ಬಗ್ಗೆ ಮಾತನಾಡಿದ ನಟ ಸುದೀಪ್, “ಇದು ಕೇವಲ ಇನ್ನೊಂದು ತಂಡವಲ್ಲ, ಇದು ಒಂದು ಭಾವನೆ. ಸಿನಿಮಾದಂತೆ, ರೇಸಿಂಗ್ ಕೂಡ ಶುದ್ಧ ಅಡ್ರಿನಾಲಿನ್. ‘ಕಿಚ್ಚಸ್ ಕಿಂಗ್ಸ್ ಬೆಂಗಳೂರು’ ಈ ನಗರದ ಚೈತನ್ಯ, ಅದರ ಪ್ರತಿಭೆ ಮತ್ತು ಧೈರ್ಯಕ್ಕೆ ನಾನು ಸಲ್ಲಿಸುವ ಗೌರವ. ಭಾರತದಲ್ಲಿ ಮೋಟಾರ್‌ಸ್ಪೋರ್ಟ್‌ಗೆ ತನ್ನ ಮುಖ್ಯವಾಹಿನಿ ಗುರುತು ಸಿಗಲು ಇದು ಸರಿಯಾದ ಸಮಯ” ಎಂದು ಹೇಳಿದರು.
RPPL ನ ಅಧ್ಯಕ್ಷ ಮತ್ತು MD ಅಖಿಲೇಶ್ ರೆಡ್ಡಿ, “ಸುದೀಪ್ ಅವರಂತಹ ಸೂಪರ್‌ಸ್ಟಾರ್ ಐ.ಆರ್.ಎಫ್.ಗೆ ಸೇರುವುದು ದಿಕ್ಕನ್ನೇ ಬದಲಾಯಿಸುವಂತಹ ಸಂಗತಿ. ಅವರ ಹೆಸರು ಪರಂಪರೆ, ಹೆಮ್ಮೆ ಮತ್ತು ಪ್ರಭಾವವನ್ನು ಹೊಂದಿದೆ, ಅದನ್ನು ಕೆಲವರು ಮಾತ್ರ ಹೊಂದಬಲ್ಲರು. ‘ಕೆಕೆಬಿ’ ತಂಡದ ಮೂಲಕ, ನಾವು ಈಗ ದಕ್ಷಿಣ ಭಾರತದ ಆತ್ಮವನ್ನು ಪ್ರತಿನಿಧಿಸುವ ತಂಡವನ್ನು ಹೊಂದಿದ್ದೇವೆ – ಅದು ಶಕ್ತಿಶಾಲಿ, ಮಹತ್ವಾಕಾಂಕ್ಷೆಯ ಮತ್ತು ಉತ್ಸಾಹಭರಿತ. ಭಾರತದಲ್ಲಿ ಮೋಟಾರ್‌ಸ್ಪೋರ್ಟ್‌ಗೆ ಇದು ಅತ್ಯಗತ್ಯವಾಗಿದೆ” ಎಂದು ತಿಳಿಸಿದರು.
ಸಿನಿಮಾ X ರೇಸಿಂಗ್: ಕ್ರೀಡಾ ಮನರಂಜನೆಯ ಹೊಸ ಯುಗ
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025ರಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ನಗರ ಮೂಲದ ತಂಡಗಳು ಸ್ಪರ್ಧಿಸಲಿವೆ. ಲಿಂಗ ಸಮಾನತೆಯೊಂದಿಗೆ ಚಾಲಕರ ತಂಡಗಳು, ಸೆಲೆಬ್ರಿಟಿ ಮಾಲೀಕತ್ವ ಮತ್ತು ರಾಷ್ಟ್ರೀಯ ಪ್ರಸಾರ ವ್ಯಾಪ್ತಿಯ ಮೂಲಕ, ಐ.ಆರ್.ಎಫ್. ಭಾರತದಲ್ಲಿ ಮೋಟಾರ್‌ಸ್ಪೋರ್ಟ್ ಎಂದರೆ ಏನು ಎಂಬುದನ್ನು ಹೊಸದಾಗಿ ವ್ಯಾಖ್ಯಾನಿಸುತ್ತಿದೆ.