ಮೈಸೂರು: ವ್ಯಕ್ತಿಯೊಬ್ಬ ಮಹಿಳೆಯರ ಹಾಗೂ ಯುವತಿಯರ ಚಿತ್ರಗಳನ್ನು ಅಸಭ್ಯವಾಗಿ ಚಿತ್ರಿಸಿ ಅವರು ಹೆಸರು ನಮೂದಿಸಿ, ಮನೆಯ ಮುಂದೆ ಇಟ್ಟು ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಅಸಭ್ಯವಾಗಿ ಚಿತ್ರ ಬಿಡಿಸಿ, ಮನೆಯ ಮುಂದೆ ಇಟ್ಟು ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮಹಿಳೆಯರು ಮಾನಸಿಕವಾಗಿ ನೊಂದಿದ್ದರು. ಹೀಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವರದರಾಜಸ್ವಾಮಿ ಬಡಾವಣೆ ನಿವಾಸಿ ಶಿವಣ್ಣ(54) ಆರೋಪಿ ಎನ್ನಲಾಗಿದೆ. ಸೋಮವಾರ ಸೈಕಲ್ ನಲ್ಲಿ ಬಂದು ಮನೆ ಮುಂದೆ ಅಸಭ್ಯ ಚಿತ್ರಗಳನ್ನು ಇಟ್ಟು ಹೋಗುತ್ತಿದ್ದ ಸಂದರ್ಭದಲ್ಲಿ ಈತ ಗ್ರಾಮಸ್ಥರ ಕೈಗೆ ಸಿಕ್ಕಿದ್ದಾನೆ. ಕೂಡಲೇ ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.