ಪುಣೆ: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಕೈನೆಟಿಕ್ ಗ್ರೀನ್, ದೇಶದ ಸಾಮಾನ್ಯ ಪ್ರಯಾಣಿಕರ ವಿಭಾಗವನ್ನು ಗುರಿಯಾಗಿಸಿಕೊಂಡು, ‘ಇ-ಲೂನಾ ಪ್ರೈಮ್’ ಎಂಬ ಕ್ರಾಂತಿಕಾರಿ ಎಲೆಕ್ಟ್ರಿಕ್ ಮೊಪೆಡ್ ಅನ್ನು ಬಿಡುಗಡೆ ಮಾಡಿದೆ. ಈ ಮೊಪೆಡ್, ಕೈಗೆಟುಕುವ ದರದಲ್ಲಿ ಉತ್ತಮ ತಂತ್ರಜ್ಞಾನ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಬಯಸುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಜನರ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ.
ಹಳೆಯ ‘ಲೂನಾ’ ಬ್ರಾಂಡ್‌ನ ಯಶಸ್ಸಿನ ಮುಂದುವರಿಕೆಯಾಗಿ, ಇತ್ತೀಚೆಗೆ ಬಿಡುಗಡೆಯಾದ ‘ಇ-ಲೂನಾ’ ಕೆಲವೇ ತಿಂಗಳುಗಳಲ್ಲಿ 25,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈಗ, ‘ಇ-ಲೂನಾ ಪ್ರೈಮ್’ ಮೂಲಕ, ಕೈನೆಟಿಕ್ ಗ್ರೀನ್ ಕಂಪನಿಯು ದೇಶದ ಬೃಹತ್ 100cc-110cc ಪೆಟ್ರೋಲ್ ಮೋಟಾರ್‌ಸೈಕಲ್ ಮಾರುಕಟ್ಟೆಗೆ ಪ್ರಬಲ ಸ್ಪರ್ಧೆ ನೀಡಲು ಮುಂದಾಗಿದೆ.
‘ಇ-ಲೂನಾ ಪ್ರೈಮ್’ ಅನ್ನು “ಭಾರತದ ಪ್ರಗತಿಯ ವೇಗವರ್ಧಕ” ಎಂದು ಬಣ್ಣಿಸಲಾಗಿದ್ದು, ದ್ವಿಚಕ್ರ ವಾಹನವನ್ನು ಹೊಂದಿಲ್ಲದ ಸುಮಾರು 75 ಕೋಟಿ ಭಾರತೀಯರಿಗೆ ವೈಯಕ್ತಿಕ ಸಾರಿಗೆಯನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳ ಕಠಿಣ ರಸ್ತೆಗಳನ್ನು ನಿಭಾಯಿಸಲು 16-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದರ ಜೊತೆಗೆ, ಸರಕುಗಳನ್ನು ಸಾಗಿಸಲು ಮುಂಭಾಗದಲ್ಲಿ ವಿಶಾಲವಾದ ಜಾಗವನ್ನು ನೀಡಲಾಗಿದೆ. ಇದು ಸಾಮಾನ್ಯ ಮೋಟಾರ್‌ಸೈಕಲ್‌ಗಳಲ್ಲಿ ಕಂಡುಬರುವುದಿಲ್ಲ.
“ಸುಧಾರಿತ ಕಾರ್ಯಕ್ಷಮತೆ”
‘ಇ-ಲೂನಾ ಪ್ರೈಮ್’, ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಹೊಂದಿದೆ. ಇದರಲ್ಲಿ ಪ್ರಕಾಶಮಾನವಾದ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿ ಸಿಂಗಲ್ ಸೀಟ್, ಬಣ್ಣದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದ ವೈಸರ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳಿವೆ. ಈ ಮೊಪೆಡ್ 110 ಕಿ.ಮೀ ಮತ್ತು 140 ಕಿ.ಮೀ ರೇಂಜ್ ನೀಡುವ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್-ಶೋರೂಂ ಬೆಲೆ 82,490 ರುಪಾಯಿಯಿಂದ ಆರಂಭವಾಗುತ್ತದೆ. ಇದು ಆರು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.
“ಪ್ರತಿ ಕಿಲೋಮೀಟರ್‌ಗೆ 10 ಪೈಸೆ”
ಹಣಕಾಸಿನ ದೃಷ್ಟಿಯಿಂದ ‘ಇ-ಲೂನಾ ಪ್ರೈಮ್’ ಅತ್ಯಂತ ಆಕರ್ಷಕವಾಗಿದೆ. ಸಾಮಾನ್ಯ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನದ ಮಾಸಿಕ ನಿರ್ವಹಣಾ ವೆಚ್ಚ (ಇಎಂಐ, ಇಂಧನ ಮತ್ತು ನಿರ್ವಹಣೆ) ಸುಮಾರು 7,500 ರೂಪಾಯಿ ಆಗಿದ್ದರೆ, ‘ಇ-ಲೂನಾ ಪ್ರೈಮ್’ ನ ಮಾಸಿಕ ವೆಚ್ಚ ಕೇವಲ 2,500 ರೂಪಾಯಿ ಮಾತ್ರ. ಇದರ ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ ಕೇವಲ 10 ಪೈಸೆ ಆಗಿದ್ದು, ಗ್ರಾಹಕರು ವಾರ್ಷಿಕವಾಗಿ 60,000 ರೂಪಾಯಿ ಉಳಿತಾಯ ಮಾಡಬಹುದು. ಇದು ಕೇವಲ ಪ್ರಯಾಣಕ್ಕೆ ಮಾತ್ರವಲ್ಲದೆ, ವ್ಯಾಪಾರ, ಸರಕು ಸಾಗಣೆ ಮತ್ತು ಇತರೆ ಉಪಯುಕ್ತ ಸೇವೆಗಳಿಗೂ ಬಳಸಬಹುದಾದ ಬಹುಪಯೋಗಿ ವಾಹನವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೈನೆಟಿಕ್ ಗ್ರೀನ್‌ನ ಸಂಸ್ಥಾಪಕಿ ಮತ್ತು ಸಿಇಒ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ, “ಭಾರತದಲ್ಲಿ ವೈಯಕ್ತಿಕ ಸಾರಿಗೆಯ ಭವಿಷ್ಯವನ್ನು ಪರಿವರ್ತಿಸುವ ನಮ್ಮ ಬದ್ಧತೆಯನ್ನು ಇ-ಲೂನಾ ಪ್ರೈಮ್ ಪ್ರತಿಬಿಂಬಿಸುತ್ತದೆ. ನಮ್ಮ ಸಂಶೋಧನೆಯ ಪ್ರಕಾರ, ದೇಶದ ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟುಕುವ, ಆಕರ್ಷಕ ಮತ್ತು ವಿಶ್ವಾಸಾರ್ಹ ಸಾರಿಗೆಯ ಅಗತ್ಯವಿದೆ. ಇ-ಲೂನಾ ಪ್ರೈಮ್, ತನ್ನ ಕಡಿಮೆ ಮಾಸಿಕ ವೆಚ್ಚ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಈ ಅಗತ್ಯವನ್ನು ಪೂರೈಸಲಿದೆ. ಇದು ಸುಸ್ಥಿರ ಸಾರಿಗೆಯು ಪ್ರತಿಯೊಬ್ಬ ಭಾರತೀಯನಿಗೂ ಲಭ್ಯವಾಗಬೇಕು ಎಂಬ ನಮ್ಮ ದೃಷ್ಟಿಯ ಪ್ರತೀಕವಾಗಿದೆ,” ಎಂದು ಹೇಳಿದರು.
ದೇಶಾದ್ಯಂತ 300ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳ ಜಾಲವನ್ನು ಹೊಂದಿರುವ ಕೈನೆಟಿಕ್ ಗ್ರೀನ್, ‘ಇ-ಲೂನಾ ಪ್ರೈಮ್’ ಮೂಲಕ ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ತನ್ನದೇ ಆದ ಛಾಪು ಮೂಡಿಸುವ ವಿಶ್ವಾಸದಲ್ಲಿದೆ.



















