ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಎರಡು ದಿನಗಳಲ್ಲಿ 25 ಕ್ಕೂ ಹೆಚ್ಚು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮಾಡಿ ಬಡ ರೋಗಿಗಳಿಗೆ ಜೀವದಾನ ಮಾಡಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಪ್ರೋ-2026 ರಾಷ್ಟ್ರೀಯ ನೇರ ಶಸ್ತ್ರ ಚಿಕಿತ್ಸೆ ಕಾರ್ಯಾಗಾರವನ್ನು ಹಮ್ಮಿಕೊಳ್ಲಲಾಗಿತ್ತು. ಈ ಹಿನ್ನೆಲೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನುರಿತ ಹಾಗೂ ತಜ್ಞ ವೈದ್ಯರಿಂದ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಉಚಿತವಾಗಿ ಜಟಿಲ ಹಾಗೂ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಕೈಗೊಂಡ ಕಿಮ್ಸ್, ಬಡರೋಗಿಗಳ ಪಾಲಿಗೆ ಸಂಜೀವಿನಿ ಎನಿಸಿಕೊಂಡಿದೆ. ನಿತ್ಯ ಹಲವು ವಿಭಾಗಗಳಲ್ಲಿ ನೂರಾರು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಲ್ಯಾಪ್ರೋ ಕಾರ್ಯಾಗಾರದಲ್ಲಿ ಏಕ ಕಾಲಕ್ಕೆ 25 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಈ ಕಾರ್ಯಾಗಾರದಲ್ಲಿ ಖ್ಯಾತ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ಪ್ರವರ್ತಕ ಡಾ. ಸಿ. ಪಳನಿವೇಲು ಸೇರಿದಂತೆ ದೇಶದ ಪ್ರಖ್ಯಾತ ನುರಿತ 30 ವೈದ್ಯರು ಭಾಗಿಯಾಗಿದ್ದರು.


















