ಚಂಡೀಗಢ: ಹರ್ಯಾಣದ ರೋಹ್ಟಕ್‌ನಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ದೆಹಲಿಯಲ್ಲಿ ಪೊಲೀಸರು ಸಚಿನ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಕೆಲವು ತಿಂಗಳಿಂದ ತನಗೂ ಹಿಮಾನಿಗೂ ಸಂಬಂಧವಿತ್ತು ಎಂದು ಆತ ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸೂಟ್ ಕೇಸ್‌ನಲ್ಲಿ ತುರುಕಿಟ್ಟ ಸ್ಥಿತಿಯಲ್ಲಿ ಹಿಮಾನಿ ನರ್ವಾಲ್ ಅವರ ಮೃತದೇಹ ಶನಿವಾರ ರೋಹ್ಟಕ್‌ನ ಬಸ್ ನಿಲ್ದಾಣದ ಬಳಿ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, 2 ದಿನಗಳ ಬಳಿಕ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನದ ಸಮಯದಲ್ಲಿ ಹಿಮಾನಿ ಅವರ ಮೊಬೈಲ್ ಫೋನ್ ಸಹ ಆರೋಪಿ ಸಚಿನ್ ಬಳಿ ಪತ್ತೆಯಾಗಿದೆ. ಹರ್ಯಾಣದ ಬಹದ್ದೂರ್‌ಗಡದ ನಿವಾಸಿಯಾಗಿರುವ ಸಚಿನ್, “ಹಿಮಾನಿ ನನ್ನಿಂದ ಲಕ್ಷಾಂತರ ರೂ. ಹಣವನ್ನು ಈಗಾಗಲೇ ಸುಲಿಗೆ ಮಾಡಿದ್ದಾಳೆ. ಇನ್ನೂ ಹೆಚ್ಚಿನ ಹಣಕ್ಕಾಗಿ ಆಕೆ ಬೇಡಿಕೆಯಿಟ್ಟಿದ್ದಳು. ಜೊತೆಗೆ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಳು” ಎಂದು ಆರೋಪಿಸಿದ್ದಾನೆ.
ಹಣಕ್ಕಾಗಿ ಆಕೆ ನಿರಂತರವಾಗಿ ನನ್ನನ್ನು ಕಾಡಿಸುತ್ತಿದ್ದಳು. ಇದರಿಂದ ರೋಸಿಹೋಗಿ ನಾನೇ ಹಿಮಾನಿಯನ್ನು ರೋಹ್ಟಕ್‌ನಲ್ಲಿರುವ ಆಕೆಯ ನಿವಾಸದಲ್ಲೇ ಕೊಂದು ಹಾಕಿದೆ ಎಂದು ಸಚಿನ್ ತಪ್ಪೊಪ್ಪಿಕೊಂಡಿದ್ದಾನೆ. ರೋಹ್ಟಕ್‌ನ ವಿಜಯನಗರದಲ್ಲಿರುವ ತನ್ನ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದ ಹಿಮಾನಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್ ಆದ ನಂತರ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿದ್ದಳು.
ಹಿಮಾನಿ ಅವರ ಶವ ಪತ್ತೆಯಾದ ಸೂಟ್ ಕೇಸ್ ಆಕೆಯ ಮನೆಯದ್ದೇ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು. ಈಗ ಆರೋಪಿ ಸಚಿನ್ ಕೂಡ ಅದನ್ನು ಒಪ್ಪಿಕೊಂಡಿದ್ದು, ಹಿಮಾನಿಯನ್ನು ಕೊಂದು, ಆಕೆಯ ದೇಹವನ್ನು ಅಲ್ಲೇ ಇದ್ದ ಸೂಟ್ ಕೇಸ್‌ನಲ್ಲಿ ತುಂಬಿ ಬಸ್ ನಿಲ್ದಾಣದಲ್ಲಿ ಇಟ್ಟು ಬಂದಿದ್ದೆ ಎಂದು ಹೇಳಿದ್ದಾನೆ.
ಹಂತಕನನ್ನು ಬಂಧಿಸುವವರೆಗೂ ಹಿಮಾನಿಯ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಆಕೆಯ ಕುಟುಂಬವು ಪಟ್ಟು ಹಿಡಿದಿತ್ತು. ಶಂಕಿತನ ಬಂಧನವಾಗುತ್ತಿದ್ದಂತೆಯೇ, ಆತನಿಗೆ ಮರಣದಂಡನೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
“ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಹೀಗಾಗಿ ಇಂದು ನಾವು ಅವಳ (ಹಿಮಾನಿ ನರ್ವಾಲ್) ಅಂತ್ಯಕ್ರಿಯೆ ನಡೆಸುತ್ತೇವೆ. ಮಾಧ್ಯಮಗಳಲ್ಲಿ ಸಾಕಷ್ಟು ವದಂತಿಗಳನ್ನು ಹಬ್ಬಿಸಲಾಗುತ್ತಿದೆ… ನಮಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ. ಆರೋಪಿಗೆ ಗಲ್ಲುಶಿಕ್ಷೆ ಆಗಬೇಕು” ಎಂದು ಹಿಮಾನಿ ಸಹೋದರ ಜತಿನ್ ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಿಮಾನಿ ಅವರ ತಾಯಿ ಸವಿತಾ, ಅಲ್ಪಾವಧಿಯಲ್ಲಿ ಹಿಮಾನಿ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಹುದ್ದೆಗಳನ್ನು ಗಿಟ್ಟಿಸಿಕೊಳ್ಳತೊಡಗಿದ್ದರಿಂದ, ಪಕ್ಷದ ಕೆಲವು ನಾಯಕರಲ್ಲಿ ಅಸೂಯೆ ಮೂಡಿತ್ತು. ಹೀಗಾಗಿ, ಈ ಕೊಲೆಯ ಹಿಂದೆ ಕಾಂಗ್ರೆಸ್ ಪಕ್ಷದೊಳಗಿನವರ ಕೈವಾಡವಿರುವ ಶಂಕೆಯಿದೆ. ಅವಳ ಏಳಿಗೆಯನ್ನು ಸಹಿಸದೇ ಈ ಕೊಲೆ ಮಾಡಿರಬಹುದು” ಎಂದು ಆರೋಪಿಸಿದ್ದರು.