ಬೆಂಗಳೂರು : ಬೆಂಗಳೂರಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ವ್ಯಕ್ತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಾಗರಹೊಳೆ ಸಮೀಪ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮೂಲ ಮಾಹಿತಿ ಪ್ರಕಾರ, ನಟ ಎಂಬಾತನಿಗೆ ಸ್ಕೆಚ್ ಹಾಕಿ ಬಂದಿದ್ದ ಗ್ಯಾಂಗ್, ತಪ್ಪಾಗಿ ಶರತ್ ಎಂಬ ಯುವಕನನ್ನು ಕಿಡ್ನಾಪ್ ಮಾಡಿದೆ. ಘಟನೆ ನಡೆದ ವೇಳೆ ಶರತ್ ತನ್ನ ಸ್ನೇಹಿತನ ಜೊತೆ ಟೀ ಕುಡಿಯುತ್ತಿದ್ದು, ಅವನನ್ನೇ ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಥಳಿಸಿ ಬಲವಂತವಾಗಿ ಆಟೋಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ನಾನವನಲ್ಲ ಎಂದು ಹೇಳಿದರೂ, ಆರೋಪಿಗಳು ಮಾತು ಕೇಳದೆ ಅವನನ್ನು ಕರೆದೊಯ್ದಿದ್ದಾರೆ.
ಕಿಡ್ನಾಪ್ ಮಾಡಿದ ಬಳಿಕ ಆರೋಪಿಗಳು ಶರತ್‌ನ ಅಕ್ಕನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಶರತ್‌ನ ಮೊಬೈಲ್ ಪರಿಶೀಲಿಸಿದಾಗ, ತಮಗೆ ಬೇಕಾದ ವ್ಯಕ್ತಿ ಇವನಲ್ಲ ಎಂಬುದು ತಿಳಿದುಬಂದಿದೆ. ಇದರಿಂದ ಆತಂಕಗೊಂಡ ಗ್ಯಾಂಗ್, ಮಧ್ಯದಲ್ಲೇ ಶರತ್‌ನನ್ನು ಬಿಟ್ಟು ಪರಾರಿಯಾಗಿದೆ.
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಬೆಚ್ಚಿಬಿದ್ದ ಶರತ್, “ನಾನಲ್ಲ ಅಂತ ಹೇಳಿದ್ರೂ ಬಿಡಲಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಕರಗ ಸಮೀಪಿಸುತ್ತಿದ್ದಂತೆ ರೌಡಿಶೀಟರ್‌ಗಳ ದರ್ಬಾರ್ ಜೋರು.. ಹವಾ ಮೇಂಟೇನ್ ಮಾಡಲು ಮಚ್ಚು ಹಿಡಿದು ಡ್ಯಾನ್ಸ್!


















