ಬಳ್ಳಾರಿ: ವೈದ್ಯರೊಬ್ಬರನ್ನು ಬಲವಂತವಾಗಿ ಅಪಹರಿಸಿರುವ ಘಟನೆಯೊಂದು ನಡೆದಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯ (Ballari District Hospital) ಮಕ್ಕಳ ವೈದ್ಯ ಡಾ. ಸುನೀಲ್ ಎಂಬುವವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ದುಷ್ಕರ್ಮಿಗಳು ವೈದ್ಯ ಡಾ. ಸುನೀಲ್ ರನ್ನು ಅಪಹರಿಸಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ವೈದ್ಯ ಸುನೀಲ್ ಬೆಳಗ್ಗೆ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಅಪಹರಿಸಿದ್ದಾರೆ ಎನ್ನಲಾಗಿದೆ.
ಸೂರ್ಯನಾರಾಯಣಪೇಟೆ ಶನೇಶ್ವರಗುಡಿ ಬಳಿ ವೈದ್ಯ ಸುನೀಲ್ ಬರುತ್ತಿದ್ದಂತೆ ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ವೈದ್ಯರ ಬಾಯಿ ಮುಚ್ಚಿ ಕಾರಿನಲ್ಲಿ ಎಳೆದೊಯ್ದಿದ್ದಾರೆ.
ಆನಂತರ ಮೊಬೈಲ್ ನಿಂದ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣು ಎಂಬುವವರಿಗೆ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ವೇಣು ಬಳ್ಳಾರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.