ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರ (doctor) ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಂತಾಗಿದೆ. ಕಿಡ್ನಾಪ್ ಮಾಡಿದ್ದವರು ವೈದ್ಯರನ್ನು ಊರೂರು ಸುತ್ತಿಸಿ ಚೆನ್ನಾಗಿ ಥಳಿಸಿ, ಬಸ್ ಚಾರ್ಜ್ ಗೆ 300 ರೂ. ಕೊಟ್ಟು ಕಳುಹಿಸಿದ್ದಾರೆ.
ಸುತ್ತಿಸಿ ಚೆನ್ನಾಗಿ ಥಳಿಸಿದ ಕಿರಾತಕರು
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವೈದ್ಯ ಡಾ. ಸುನೀಲ್ ಎಂಬುವವರನ್ನು ಗುಂಪೊಂದು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸುಮಾರು ಆರು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಅಲರ್ಟ್ ಆದ ಖಾಕಿ ಪಡೆ ಮೂರು ತಂಡ ರಚನೆ ಮಾಡಿತ್ತು. ಹೀಗಾಗಿ ಭಯಭೀತರಾದ ಕಿಡ್ನ್ಯಾಪರ್ಸ್ ಗುಂಪು ವೈದ್ಯನನ್ನು ಸುತ್ತಿಸಿ ಬಳಿಕ ಜಿಲ್ಲೆಯ ಕುರಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಆದರೆ, ವೈದ್ಯ ಸುರಕ್ಷಿತವಾಗಿ ಮನೆ ತಲುಪಿದ್ದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವೈದ್ಯರ ಮೊಬೈಲ್ ನಿಂದಲೇ ಹಣಕ್ಕೆ ಬೇಡಿಕೆ
ಕಿಡ್ನ್ಯಾಪ್ ಮಾಡಿದ್ದ ಕಿಡ್ನಾಪರ್ಸ್, ವೈದ್ಯರ ಮೊಬೈಲ್ ನಿಂದಲೇ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ಕೋಟಿ ಹಣ, ಮೂರು ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಕುಟುಂಬಸ್ಥರು ಬಳ್ಳಾರಿ ಎಸ್ಪಿಗೆ ದೂರು ನೀಡಿದ್ದರು.
300 ರೂ. ಕೊಟ್ಟು ಕಳುಹಿಸಿದ ಕಿರಾತಕರು
ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಮೂರು ತಂಡ ರಚನೆ ಮಾಡಿ, ವೈದ್ಯರ ಮೊಬೈಲ್ ಲೋಕೇಶನ್ ಟ್ರ್ಯಾಕ್ ಮಾಡಿ, ಬಲೆ ಬೀಸಿದ್ದರು. ಆದರೆ ಶನಿವಾರ ರಾತ್ರಿ ಕಿಡ್ನ್ಯಾಪರ್ಸ್ ಗಳಿಗೆ ಅದೇನು ಬುದ್ದಿ ಬಂತೊ ಗೊತ್ತಿಲ್ಲ. ವೈದ್ಯನ ಕೈಗೆ 300 ರೂ ಕೊಟ್ಟು ಬಸ್ ಗೆ ಹೋಗು ಎಂದು ಹೇಳಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು ಪರಾರಿ
ಕಿಡ್ನಾಪರ್ಸ್ ಕೈ ಬಿಡುತ್ತಿದ್ದಂತೆ ವೈದ್ಯ ತನ್ನ ಸಹೋದರ ವೇಣು ಎಂಬುವವರಿಗೆ ಕರೆ ಮಾಡಿ ಸೋಮಸಮುದ್ರ ಗ್ರಾಮದ ಹತ್ತಿರ ಬಿಟ್ಟು ಹೋಗಿದ್ದಾರೆ. ಅವರು ಮೂರು ಜನ ಇದ್ದರು. ಕನ್ನಡ ಮತ್ತು ಹಿಂದಿ ಬಾಷೆ ಮಾತನಾಡುತ್ತಿದ್ದರು. ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಕೂಡಲೇ ಅಲರ್ಟ್ ಆದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆನಂತರ ವೈದ್ಯರನ್ನು ಸುರಕ್ಷಿತವಾಗಿ ಮನೆಗೆ ಕರೆ ತರಲಾಗಿದೆ. ಆದರೆ, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.