ಹುಬ್ಬಳ್ಳಿ: ರಾಷ್ಟ್ರದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಕೆಳಗಿಳಿಯುವ ಸಾಧ್ಯತೆಯಿದ್ದು, ಸರ್ಕಾರವೇ ಬದಲಾಗಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಆಗುವ ಸಾಧ್ಯತೆಯಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು 75 ವರ್ಷ ನಂತರ ರಾಜಕೀಯ ನಿವೃತ್ತಿ ಅವಶ್ಯ ಎಂದಿದ್ದಾರೆ. ಸೆಪ್ಟಂಬರ್ ಗೆ ಮೋದಿಯವರಿಗೆ 75 ಆಗಲಿದ್ದು, ಅವರು ಪ್ರಧಾನಿ ಪಟ್ಟದಿಂದ ಕೆಳಗಿಳಿಯಬೇಕು. ಇಲ್ಲವಾದರೆ ಈ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಬಹಿರಂಗವಾಗಲಿದೆ ಎಂದಿದ್ದಾರೆ.
ಮೋದಿ ಇಳಿದರೆ ಜೆಡಿಯು, ಟಿಡಿಪಿಯಂತಹ ಪಕ್ಷಗಳು ಬೆಂಬಲ ಹಿಂಪಡೆದು ಯುಪಿಎಗೆ ಬೆಂಬಲ ನೀಡಬಹುದು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೆ ಮೊದಲ ಆಯ್ಕೆಯಾದರೆ, ಖರ್ಗೆ ಎರಡನೇ ಆಯ್ಕೆ ಆಗಲಿದ್ದಾರೆ ಎಂದು ರಾಯರಡ್ಡಿ ಹೇಳಿದ್ದಾರೆ.
ಗಾಂಧಿ ಕುಟುಂಬ ಅಧಿಕಾರ ತ್ಯಾಗಕ್ಕೆ ತನ್ನದೇ ಕೊಡುಗೆ ನೀಡಿದ್ದಕ್ಕೆ ಸೋನಿಯಾ ಗಾಂಧಿ ಸ್ಪಷ್ಟ ಉದಾಹರಣೆ. ಈ ಬಾರಿಯೂ ಆ ಕುಟುಂಬ ತ್ಯಾಗಕ್ಕೆ ಮುಂದಾದರೆ ಖರ್ಗೆ ಪ್ರಧಾನಿ ಆಗಲಿದ್ದಾರೆ ಎಂಬ ಆಶಯ ನನ್ನದಾಗಿದೆ. ರಾಜ್ಯದಲ್ಲಿ ವಿಪಕ್ಷದವರು ಖರ್ಗೆ ಅವರನ್ನು ಪಿಎಂ ಎಂದು ಘೋಷಿಸುತ್ತೀರಾ ಎಂದು ವ್ಯಂಗ್ಯ ರೂಪದಲ್ಲಿ ಕೇಳುತ್ತಿದ್ದಾರೆ. ಅವರ ವ್ಯಂಗ್ಯ ಸತ್ಯವಾಗುವ ಕಾಲ ಬಂದಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ. ಮುಂದಿನ ಮೂರು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಹೈಕಮಾಂಡ್ ತೀರ್ಮಾನ ಕೈಗೊಂಡರೆ ಮಾತ್ರ ಏನಾದರು ಆಗಬಹುದು ಎಂದು ರಾಯರಡ್ಡಿ ಹೇಳಿದ್ದಾರೆ.