ನವದೆಹಲಿ: ಪಂಜಾಬ್‌ನಲ್ಲಿ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಸ್ಸಿಯಾನನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕೇಂದ್ರ ಭದ್ರತಾ ಸಂಸ್ಥೆಗಳ ಮೂಲಗಳು ಖಚಿತಪಡಿಸಿವೆ. ಪ್ರಸ್ತುತ ಅಮೆರಿಕ ವಶದಲ್ಲಿರುವ ಪಸ್ಸಿಯಾ ಶೀಘ್ರದಲ್ಲೇ ಬಿಗಿ ಭದ್ರತೆಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾನೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಭಾರತಕ್ಕೆ ರಾಜತಾಂತ್ರಿಕ ಮಟ್ಟದಲ್ಲಿ ಸಿಕ್ಕ ಗೆಲುವು ಎಂದು ಬಣ್ಣಿಸಲಾಗುತ್ತಿದೆ.
ಪಸ್ಸಿಯಾನನ್ನು ಏಪ್ರಿಲ್ 17ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು ಬಂಧಿಸಿದ್ದರು. ಭಾರತೀಯ ಏಜೆನ್ಸಿಗಳೊಂದಿಗೆ ನಿರಂತರ ಸಮನ್ವಯದ ನಂತರ ಈ ಬಂಧನ ನಡೆದಿತ್ತು. ಪಂಜಾಬ್‌ನಾದ್ಯಂತ, ವಿಶೇಷವಾಗಿ ಪೊಲೀಸ್ ಠಾಣೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಈತನ ಪಾತ್ರವಿದ್ದ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಆತನ ಮೇಲೆ ನಿಗಾ ಇಟ್ಟಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕೃತವಾಗಿ ಪಸ್ಸಿಯಾನನ್ನು ‘ವಾಂಟೆಡ್ ಭಯೋತ್ಪಾದಕ’ ಎಂದು ಘೋಷಿಸಿತ್ತು. ಚಂಡೀಗಢ ಗ್ರೆನೇಡ್ ದಾಳಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.
ಐಎಸ್‍ಐ ಮತ್ತು ಖಲಿಸ್ತಾನಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ
ಗುಪ್ತಚರ ಮೂಲಗಳ ಪ್ರಕಾರ, ಪಸ್ಸಿಯಾ ಪಾಕಿಸ್ತಾನದ ಐಎಸ್‌ಐನ ಉನ್ನತ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದ ಮತ್ತು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಹರ್ವಿಂದರ್ ಸಿಂಗ್ ರಿಂಡಾ ಅವರ ಜಾಲ ಸೇರಿದಂತೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಂದ ಸಕ್ರಿಯ ಬೆಂಬಲವನ್ನು ಪಡೆಯುತ್ತಿದ್ದ. ಕಳೆದ ಎರಡು ವರ್ಷಗಳಲ್ಲಿ ಯೋಜಿತ ಗ್ರೆನೇಡ್ ದಾಳಿಗಳು ಮತ್ತು ಉದ್ದೇಶಿತ ಹಿಂಸಾಚಾರಗಳ ಮೂಲಕ ದೇಶದಲ್ಲಿ ಅಸ್ಥಿರತೆ ಉಂಟು ಮಾಡುವಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ.
ಪಸ್ಸಿಯಾನ ಬಂಧನವು ಪಂಜಾಬ್ ಪೊಲೀಸ್, ಕೇಂದ್ರ ಗುಪ್ತಚರ ಏಜೆನ್ಸಿಗಳು ಮತ್ತು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ. ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಖಲಿಸ್ತಾನಿ ಕಾರ್ಯಕರ್ತರನ್ನು ಈ ಸಂಸ್ಥೆಗಳು ಜಂಟಿಯಾಗಿ ಟ್ರ್ಯಾಕ್ ಮಾಡುತ್ತಿದ್ದವು.
ಕಠಿಣ ಕಾನೂನುಗಳಡಿ ವಿಚಾರಣೆ
ಒಮ್ಮೆ ಗಡಿಪಾರು ಮಾಡಿದ ನಂತರ, ಹ್ಯಾಪಿ ಪಸ್ಸಿಯಾನನ್ನು ಭಾರತೀಯ ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗುತ್ತದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (UAPA) ಸೇರಿದಂತೆ ಅನೇಕ ಭಯೋತ್ಪಾದನೆ ವಿರೋಧಿ ಕಾನೂನುಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆತನ ವಿಚಾರಣೆಯು ವಿಶಾಲ ಅಂತರರಾಷ್ಟ್ರೀಯ ಭಯೋತ್ಪಾದಕ ಜಾಲದ ಬಗ್ಗೆ ಮಾಹಿತಿಗಳನ್ನು ನೀಡುವ ನಿರೀಕ್ಷೆಯಿದೆ. ಈ ಜಾಲವು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮತ್ತು ವಿದೇಶಿ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಲಾಗಿದೆ.
ಪಸ್ಸಿಯಾ ಕೈವಾಡವಿರುವ ಪ್ರಮುಖ ದಾಳಿಗಳು(2024-2025)
2024 ಮತ್ತು 2025 ರ ನಡುವೆ, ಹ್ಯಾಪಿ ಪಸ್ಸಿಯಾ ಕನಿಷ್ಠ 14 ಭಯೋತ್ಪಾದಕ ದಾಳಿಗಳನ್ನು ಸಂಘಟಿಸಿದ್ದಾನೆ ಮತ್ತು ನೆರವಾಗಿದ್ದಾನೆ ಎಂದು ಆರೋಪಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಪಂಜಾಬ್‌ನಲ್ಲಿನ ಪೊಲೀಸ್ ಠಾಣೆಗಳು ಮತ್ತು ಸಿಬ್ಬಂದಿಯನ್ನು ಗುರಿಯಾಗಿಸಿ ನಡೆದಿದ್ದ ದಾಳಿಗಳು:
ನವೆಂಬರ್ 24, 2024 – ಅಜನಾಲಾ ಪೊಲೀಸ್ ಠಾಣೆ: ಠಾಣೆಯ ಹೊರಗೆ ಆರ್‌ಡಿಎಕ್ಸ್ ಅಳವಡಿಸಲಾಗಿತ್ತು, ಆದರೆ ಸ್ಫೋಟಗೊಂಡಿರಲಿಲ್ಲ. ಪಸ್ಸಿಯಾ ಇದರ ಹೊಣೆ ಹೊತ್ತುಕೊಂಡಿದ್ದ. ಇಬ್ಬರು ಶಂಕಿತರನ್ನು ಬಂಧಿಸಿ, ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿತ್ತು
- ನವೆಂಬರ್ 27 – ಗುರ್‌ಬಖ್ಶ್ ನಗರ: ನಿರ್ಜನ ಪೊಲೀಸ್ ಠಾಣೆಯಲ್ಲಿ ಗ್ರೆನೇಡ್ ಸ್ಫೋಟ.
- ಡಿಸೆಂಬರ್ 2 – ಕಥ್‌ಗಢ್ (ಎಸ್‌ಬಿಎಸ್ ನಗರ): ಗ್ರೆನೇಡ್ ದಾಳಿ. ಮೂವರು ಭಯೋತ್ಪಾದಕರನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
- ಡಿಸೆಂಬರ್ 4 – ಮಜಿಥಾ ಪೊಲೀಸ್ ಠಾಣೆ: ಇಲ್ಲಿ ನಡೆದ ಸ್ಫೋಟವನ್ನು ಪೊಲೀಸರು ಟೈರ್ ಸ್ಫೋಟ ಎಂದು ತಳ್ಳಿಹಾಕಿದ್ದರು. ಆದರೆ, ಮಾಜಿ ಶಾಸಕ ಬಿಕ್ರಮ್ ಮಜಿಥಿಯಾ ಭಯೋತ್ಪಾದಕ ದಾಳಿ ಎಂದು ಸೂಚಿಸುವ ಚಿತ್ರಗಳನ್ನು ಹಂಚಿಕೊಂಡಿದ್ದರು.
- ಡಿಸೆಂಬರ್ 13 – ಆಲಿವಾಲ್ ಬಟಾಲಾ: ರಾತ್ರಿಯ ವೇಳೆ ಗ್ರೆನೇಡ್ ಸ್ಫೋಟ. ಪಸ್ಸಿಯಾ ಮತ್ತು ಆತನ ಸಹವರ್ತಿಗಳೇ ಇದರ ಹೊಣೆ ಹೊತ್ತುಕೊಂಡಿದ್ದರು.
- ಡಿಸೆಂಬರ್ 17 – ಇಸ್ಲಾಮಾಬಾದ್ ಪೊಲೀಸ್ ಠಾಣೆ: ಆರಂಭದಲ್ಲಿ ನಿರಾಕರಿಸಲಾಗಿದ್ದರೂ, ನಂತರ ಪಂಜಾಬ್ ಡಿಜಿಪಿ ಇದನ್ನು ಭಯೋತ್ಪಾದಕ ಬಾಂಬ್ ದಾಳಿ ಎಂದು ದೃಢಪಡಿಸಿದ್ದರು.
- ಜನವರಿ 16 – ಜೈತ್ಯಪುರ, ಅಮೃತಸರ: ಮದ್ಯ ವ್ಯಾಪಾರಿ ಅಮನ್‌ದೀಪ್ ಜೈತ್ಯಪುರಿಯಾ ಅವರ ನಿವಾಸದ ಮೇಲೆ ಗ್ರೆನೇಡ್ ಎಸೆಯಲಾಗಿತ್ತು.
- ಜನವರಿ 19 – ಗುಮ್ತಾಲಾ ಪೊಲೀಸ್ ಪೋಸ್ಟ್, ಅಮೃತಸರ: ಬಾಂಬ್ ಸ್ಫೋಟ. ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
- ಫೆಬ್ರವರಿ 3 – ಫತೇಗಢ್ ಚುರಿಯನ್ ರಸ್ತೆ: ಮುಚ್ಚಿದ್ದ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ.
- ಫೆಬ್ರವರಿ 14 – ಡೇರಾ ಬಾಬಾ ನಾನಕ್, ಗುರ್ದಾಸ್‌ಪುರ: ಪೊಲೀಸ್ ಸಿಬ್ಬಂದಿಯ ಮನೆಯ ಹೊರಗೆ ಅಲ್ಪತೀವ್ರತೆಯ ಸ್ಫೋಟ.
- ಮಾರ್ಚ್ 15 – ಠಾಕೂರ್ ದ್ವಾರಾ ದೇಗುಲ, ಅಮೃತಸರ: ಇಲ್ಲಿ ನಡೆದ ದಾಳಿಯು ಪೊಲೀಸ್ ಎನ್‌ಕೌಂಟರ್‌ಗೆ ಕಾರಣವಾಯಿತು, ಇದರಲ್ಲಿ ಆರೋಪಿ ಗುರ್ಸಿದ್ದಿಕ್ ಸಿಂಗ್ ಹತ್ಯೆಗೀಡಾದ.