ನವದೆಹಲಿ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ನ(Khalistan) ಸಕ್ರಿಯ ಭಯೋತ್ಪಾದಕನೊಬ್ಬನನ್ನು ಪಂಜಾಬ್ ಪೊಲೀಸರು ಮತ್ತು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಗುರುವಾರ ಬಂಧಿಸಿದೆ.
ಪಂಜಾಬ್ನ ಅಮೃತಸರದ ನಿವಾಸಿ ಲಾಜರ್ ಮಾಸಿಹ್ ಬಂಧಿತ ಖಲಿಸ್ತಾನಿ ಉಗ್ರ. ಗುರುವಾರ ಬೆಳಗಿನ ಜಾವ 3.20ರ ಸುಮಾರಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ. ಈತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಜರ್ಮನಿ ಘಟಕವನ್ನು ನಿರ್ವಹಿಸುತ್ತಿರುವ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗೆ ಆಪ್ತ ಎಂದು ಮೂಲಗಳು ತಿಳಿಸಿವೆ.
ಲಾಜರ್ ಮಾಸಿಹ್ ಬಳಿಯಿದ್ದ ಮೂರು ಹ್ಯಾಂಡ್ ಗ್ರೆನೇಡ್ಗಳು, ಎರಡು ಡಿಟೋನೇಟರ್ಗಳು, 7.62 ಎಂಎಂ ರಷ್ಯಾದ ಪಿಸ್ತೂಲ್, 13 ಲೈವ್ ಕಾರ್ಟ್ರಿಜ್ಗಳು ಮತ್ತು ಸ್ಫೋಟಕಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಿಳಿ ಬಣ್ಣದ ಸ್ಫೋಟಕ ಪುಡಿ, ಗಾಜಿಯಾಬಾದ್ ವಿಳಾಸವಿರುವ ಆಧಾರ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್ ಅನ್ನೂ ಅವನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬಂಧಿತ ಉಗ್ರ ಲಾಜರ್ ಮಾಸಿಹ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ಜರ್ಮನಿ ಮೂಲದ ಮಾಡ್ಯೂಲ್ನ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿ ಆದೇಶದ ಅನ್ವಯ ಕೆಲಸ ಮಾಡುತ್ತಿದ್ದ. ಪಾಕಿಸ್ತಾನ ಮೂಲದ ಐಎಸ್ಐ ಕಾರ್ಯಕರ್ತರೊಂದಿಗೆ ಈತ ನೇರ ಸಂಪರ್ಕ ಹೊಂದಿದ್ದ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಯುಪಿ ವಿಶೇಷ ಕಾರ್ಯಪಡೆ, ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಹೇಳಿದ್ದಾರೆ.
ಇದನ್ನೂ ಓದಿ: Language row: ಮುಂಬೈನಲ್ಲಿ ವಾಸಿಸಲು ಮರಾಠಿ ಗೊತ್ತಿರಬೇಕಾಗಿಲ್ಲ: ಆರ್‌ಎಸ್‌ಎಸ್ ನಾಯಕ ವಿವಾದ
ಲಂಡನ್‌ನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ಮಾಡಲು ಯತ್ನಿಸಿ, ಭಾರತದ ಧ್ವಜವನ್ನು ಹರಿದು ಹಾಕಿದ ಘಟನೆಯ ಬೆನ್ನಲ್ಲೇ ಪಂಜಾಬ್‌ನಲ್ಲಿ ಖಲಿಸ್ತಾನಿ ಉಗ್ರನನ್ನು ಬಂಧಿಸಿರುವುದು ಮಹತ್ವ ಪಡೆದಿದೆ.