ಬೆಂಗಳೂರು: ಇಂದು ರಾಜ್ಯ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಖಾಕಿ ಪಡೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ.
ರಸ್ತೆಯಲ್ಲಿ ಮೆರವಣಿಗೆ ನಡೆಸಲು ಖಾಕಿಯಿಂದ ಅವಕಾಶ ನೀಡಲಾಗಿಲ್ಲ. ಹೀಗಾಗಿ ಪ್ರತಿಭಟನಾಕಾರರು ರಸ್ತೆಯಲ್ಲಿ ಪ್ರತಿಭಟನೆ ನಡೆಸುವಂತಿಲ್ಲ. ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಬಲವಂತವಾಗಿ ಬಂದ್ ಮಾಡಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಬಂದ್ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್ ಗೆ ಸುಪ್ರಿಂ ಕೋರ್ಟ್ ಗೈಡ್ ಲೈನ್ಸ್ ಮನವರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬಂದ್ ಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗ ಮತ್ತು ಪಶ್ಚಿಮ ವಿಭಾಗದಲ್ಲಿ ಮಾತ್ರ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಭಾಗದಲ್ಲಿ ಮಫ್ತಿಯಲ್ಲಿ ಖಾಕಿ ಅಲರ್ಟ್ ಆಗಿದೆ. ಕಮಿಷನರ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಅಲ್ಲದೇ, ಆಯಾ ವಿಭಾಗದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ.
ಪಶ್ಚಿಮ ಮತ್ತು ಕೇಂದ್ರ ವಿಭಾಗದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಬಂದ್ ಹಿನ್ನೆಲೆಯಲ್ಲಿ 4 ಮಂದಿ ಎಸಿಪಿ ಸೇರಿದಂತೆ 11 ಮಂದಿ ಇನ್ಸ್ ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳದಲ್ಲಿ 65 ಪಿಎಸ್ ಐಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ಸೇರಿದಂತೆ 700 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಎರಡೂ ವಿಭಾಗದಲ್ಲಿ ಒಟ್ಟು 1200 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕೆ ಎಸ್ ಆರ್ ಪಿ 46, ಸಿಎಆರ್ 30 ಹಾಗೂ ಎರಡು ವಾಟರ್ ಜೆಟ್ ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಸಂಘಟನೆಯ ಪ್ರಮುಖರ ಮನೆ ಬಳಿಯೂ ಪೊಲೀಸರು ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ.