ಬೆಂಗಳೂರು : 100 ರೂಪಾಯಿ ಬೆಳ್ಳಿ ಖರೀದಿಸಿ 2.28 ಲಕ್ಷ ಮೌಲ್ಯದ ಚಿನ್ನ ಕದ್ದೊಯ್ದ ಘಟನೆ ಚಾಮರಾಜಪೇಟೆಯ ರುದ್ರಪ್ಪ ಗಾರ್ಡನ್ ಬಳಿಯ ಜ್ಯೂವೆಲರಿ ಶಾಪ್‌ನಲ್ಲಿ ನಡೆದಿದೆ.
ಜುಲೈ 14ರಂದು ಚಾಮುಂಡ ಜ್ಯೂವೆಲರ್ಸ್ ನಲ್ಲಿ ಇಬ್ಬರು ಖದೀಮರು ಕೈಚಳಕ ತೋರಿಸಿದ್ದು, ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ನೂರು ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತು ಖರೀದಿ ಮಾಡುವ ಕಳ್ಳರು, ಇನ್ನೂರು ರೂಪಾಯಿ ನೀಡಿ ನೂರು ರೂಪಾಯಿ ಚಿಲ್ಲರೆ ಪಡೆಯುತ್ತಾರೆ. ಬಳಿಕ 5 ನೂರು ರೂಪಾಯಿ ನೀಡಿ ಚೇಂಜ್ ನೀಡುವಂತೆ ಮಾಲೀಕರ ಬಳಿ ಕೇಳಿ, ಚೇಂಜ್ ನೀಡುವಾಗ ಮಾಲೀಕನಿಗೆ ಗೊತ್ತಾಗದಂತೆ 2.28 ಲಕ್ಷ ಚಿನ್ನವನ್ನು ಕದ್ದಿದ್ದಾರೆ.
ಚೇಂಜ್ ಕೊಡುವುದರೊಳಗೆ 28 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು ತಮ್ಮ ಜೇಬಿಗೆ ಹಾಕಿಕೊಂಡಿದ್ದರು. ಕಳ್ಳರ ಕೈಚಳಕ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದ್ದು, ಕಳ್ಳರು ಅಂಗಡಿಯಿಂದ ಹೋದ ಸ್ವಲ್ಪ ಸಮಯದ ಬಳಿಕ ಚಿನ್ನಾಭರಣ ಕಳವಾಗಿರುವುದು ತಿಳಿಯುತ್ತದೆ. ಬಳಿಕ ಸಿಸಿಟಿವಿ ದೃಶ್ಯ ಆಧರಿಸಿ ಚಿನ್ನದ ಮಳಿಗೆಯ ಮಾಲೀಕರು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ಧಾರೆ.



















