ಬೆಂಗಳೂರು: ಎಟಿಎಂಗೆ ಬರುತ್ತಿದ್ದ ವೃದ್ಧರನ್ನು ವಂಚಿಸುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉತ್ತರ ಭಾರತ ಮೂಲದ ಮೂವರು ಯುವಕರು ಬಂಧಿತ ಆರೋಪಿಗಳು. ಬಂಧಿತರು ಎಟಿಎಂಗಳಿಗೆ ಬರುತ್ತಿದ್ದ ಅಮಾಯಕ ವೃದ್ಧರಿಗೆ ಮೋಸ ಮಾಡುತ್ತಿದ್ದರು ಎನ್ನಲಾಗಿದೆ. ರಜೀಬ್, ಸುಭಾಂಸು ಮತ್ತು ನಯಾಜ್ ಬಂಧಿತರು.
ಬಂಧಿತ ಆರೋಪಿಗಳು ಕೆಲವೇ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಇವರು ಫ್ರೆಜರ್ ಟೌನ್, ಶಿವಾಜಿನಗರ ಸುತ್ತಮುತ್ತಲ ನಿರ್ಜನ ಎಟಿಎಂಗಳ ಬಳಿಯೇ ಸುತ್ತಾಡುತ್ತಿದ್ದರು. ನಂತರ ಅಲ್ಲಿಗೆ ಬರುತ್ತಿದ್ದ ವೃದ್ಧರನ್ನೇ ವಂಚಿಸುತ್ತಿದ್ದರು.
ಆರೋಪಿಗಳು ಎಟಿಎಂಗಳಿಗೆ ಬರುವ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಬಳಿ ಹೋಗುತ್ತಿದ್ದರು. ಅಲ್ಲಿ ಸಹಾಯದ ನೆಪದಲ್ಲಿ ಹೋಗಿ ಅಸಲಿ ಎಟಿಎಂ ಪಡೆಯುತ್ತಿದ್ದರು. ಆದರೆ, ಅಲ್ಲಿ ತಮ್ಮ ಬಳಿ ಇದ್ದ ನಕಲಿ ಕಾರ್ಡ್ ಹಾಕಿ, ಸರಿ ಇಲ್ಲ ಎನ್ನುತ್ತಿದ್ದರು. ವೃದ್ಧರು ಹೋದ ನಂತರ ಎಟಿಎಂ ಪಿನ್ ಬಳಸಿ ಹಣ ಡ್ರಾ ಮಾಡುತ್ತಿದ್ದರು. ಹೀಗೆ ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.