ಬೆಂಗಳೂರು: ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ಕಾಡು ಸೇರುತ್ತಿದ್ದ ಐನಾತಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕದ್ದ ಚಿನ್ನಾಭರಣ, ಹಣದೊಂದಿಗೆ ಆರೋಪಿ ಕಾಡಿನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ನಗರದಲ್ಲಿ ಕಳ್ಳತನ ಮಾಡಿ ಕಾಡಿನಲ್ಲಿ ವಾಸ ಮಾಡುತ್ತಿದ್ದ ಈ ಕುಖ್ಯಾತ ಕಳ್ಳ ನರಸಿಂಹಾರೆಡ್ಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈತ ಸುಮಾರು 50ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನದ ಜಾಡು ಹಿಡಿದು ತನಿಖೆ ಕೈಗೊಂಡಾಗ ಈತ ಕದ್ದ ವಸ್ತುಗಳ ಸಮೇತ ಕಾಡಿನಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಈತ ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ನಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ಹಗಲಿನಲ್ಲಿ ಕಾಡಿನ ಬಂಡೆಗಳ ಮೇಲೆ ಹಾಗೂ ರಾತ್ರಿ ವೇಳೆ ಮರಗಳ ಮೇಲೆ ಮಲಗುತ್ತಿದ್ದ. ನಗರಕ್ಕೆ ಬಂದು ಸುತ್ತಾಡಿ ಒಂಟಿ ಮನೆಗಳು ಹಾಗೂ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ರಾತ್ರಿ ಬಂದು ಕಳ್ಳತನ ಮಾಡುತ್ತಿದ್ದ. ನಂತರ ಕಾಡಿಗೆ ಹೋಗಿ ತಲೆ ಮರೆಸಿಕೊಳ್ಳುತ್ತಿದ್ದ. ಈತನ ಹಿಡಿಯಲು ಯತ್ನಿಸುತ್ತಿದ್ದ ಪೊಲೀಸರಿಗೆ ನನ್ನನ್ನು ಹಿಡಿಯಲು ಆಗುವುದಿಲ್ಲ ಎಂದು ಚಾಲೆಂಜ್ ಮಾಡುತ್ತಿದ್ದ.
ಈತ ಪೊಲೀಸರು ನನ್ನ ಹಿಂದೆ ಬರಬೇಕು. ಬೆನ್ನು ಬಿದ್ದು ನನ್ನನ್ನು ಬಂಧಿಸಬೇಕು ಎಂದು ಚಾಲೆಂಜ್ ಮಾಡುತ್ತಿದ್ದ. ಪೊಲೀಸರು ಈಗ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ಸಂದರ್ಭದಲ್ಲಿ ನರಸಿಂಹ ರೆಡ್ಡಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 70 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.