ಕಲಬುರಗಿ: ತನ್ನ ಲಿವ್ ಇನ್ ಗೆಳತಿಯ ಆಸೆ ಪೂರೈಸಲು ಹಾಗೂ ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ವ್ಯಕ್ತಿಯೊಬ್ಬನನ್ನು ಕಲಬುರಗಿ ವಿವಿ ಪೊಲೀಸರು ಬಂಧಿಸಿದ್ದಾರೆ.
ಕಲ್ಲಪ್ಪ ಅಲಿಯಾಸ್ ಸಂಜು ಪೂಜಾರಿ (24) ಮತ್ತು ವಿಜಯಪುರ ಮೂಲದ ಸಂತೋಷ್ ಪೂಜಾರಿ (30) ಬಂಧಿತ ಆರೋಪಿಗಳು. ಇಬ್ಬರೂ ಸೇರಿ ನವೆಂಬರ್ 22ರಂದು ಕೂಲಿ ಕೆಲಸಕ್ಕೆಂದು ಸುನಿತಾ ಎಂಬವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಕೊರಳಲ್ಲಿದ್ದ 3 ಗ್ರಾಂ ಚಿನ್ನದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಶ್ವವಿದ್ಯಾಲಯ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ತಿಗಡಿ ಮತ್ತು ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆತನ ಮೇಲೆ ಈಗಾಗಲೇ 6 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಕಲ್ಲಪ್ಪ ಯುವತಿಯೊಂದಿಗೆ ಲಿವಿಂಗ್ ಟುಗೆದರ್ನಲ್ಲಿದ್ದ. ಕೂಲಿ ಕೆಲಸ ಮಾಡುತ್ತಿದ್ದು, ಖರ್ಚಿಗೆ ದುಡಿದ ಹಣ ಸಾಕಾಗದೇ ಇದ್ದಾಗ ಪರ್ಸ್ಗಳನ್ನು ಕದಿಯುತ್ತಿದ್ದ. ಮನೆ ಖರ್ಚು, ತನ್ನ ಖರ್ಚು ಹೆಚ್ಚಾದಂತೆ ಮನೆಗಳ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಸದ್ಯ ಬಂಧಿತರಿಂದ 61 ಗ್ರಾಂ ಚಿನ್ನ, 680 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು ₹7,62,400 ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಬಸ್ಗೆ ಬೈಕ್ ಡಿಕ್ಕಿ | ಸ್ಥಳದಲ್ಲೇ ಯುವಕ ದುರ್ಮರಣ



















