ಮೈಸೂರು: ಸಾವಿನ ಮನೆಯನ್ನೂ ಬಿಡದ ಖದೀಮರು, ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ತಾಯಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ 1.34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ 1 ಲಕ್ಷ ನಗದನ್ನು ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆ ಮೈಸೂರಿನ(Mysore) ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಂ.ಶ್ರೀ ನಗರದಲ್ಲಿ ನಡೆದಿದೆ. ಬನ್ನೂರಿನಲ್ಲಿ ವಾಸವಿದ್ದ ಕಂಟ್ರಾಕ್ಟರ್ ಬಸವರಾಜು ಎಂಬುವವರ ತಾಯಿ ಮಂಗಳವಾರ ಸಾವನ್ನಪ್ಪಿದ್ದರು. ಹೀಗಾಗಿ ಕುಟುಂಬಸ್ಥರೆಲ್ಲ ದುಃಖದ ಮೊಡವಿನಲ್ಲಿದ್ದರು. ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯ ಸಂಸ್ಕಾರಕ್ಕಾಗಿ ಬಸವರಾಜ್ ಕುಟುಂಬ ಸಮೇತ ತೆರಳಿದ್ದರು.
ಈ ಸಂದರ್ಭದಲ್ಲಿ ಮನೆ ಬಾಗಿಲ ಬೀಗ ಮುರಿದು ಒಳ ನುಗ್ಗಿದ್ದ ಖದೀಮರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಟುಂಬಸ್ಥರು ಮಾತ್ರ ಒಂದು ಕಡೆ ತಾಯಿ, ಇನ್ನೊಂದು ಕಡೆ ಚಿನ್ನಾಭರಣ, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.