ಚಿಕ್ಕಬಳ್ಳಾಪುರ: ಇತ್ತೀಚೆಗೆ ಖದೀಮರ ಹಾವಳಿ ಹೆಚ್ಚಾಗುತ್ತಿದ್ದು, ಈಗ ಮುಜರಾಯಿ ಇಲಾಖೆಗೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಬಾಗೇಪಲ್ಲಿ (Bagepalli) ಪಟ್ಟಣದ ಹೃದಯ ಭಾಗದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಇತಿಹಾಸ ಪ್ರಸಿದ್ಧ ಬೈಲಾಂಜನೇಯಸ್ವಾಮಿ ದೇವಾಲಯ (Balanjaneya Temple) ಹಾಗೂ ಅಯ್ಯಪ್ಪ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ.
ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಮಧ್ಯರಾತ್ರಿ ವೇಳೆ ಕಳ್ಳರು ದೇವಾಲಯದ ಆವರಣದ ಹಿಂಭಾಗದಿಂದ ಪ್ರವೇಶಿಸಿದ್ದಾರೆ. ಕಬ್ಬಿಣದ ಗೇಟ್ ಬೀಗ ಒಡೆದು ಹುಂಡಿಯಲ್ಲಿದ್ದ (Temple Treasury) ಲಕ್ಷಾಂತರ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ಬೆಳಗ್ಗೆ ಮಹಿಳೆಯೊಬ್ಬರು ಸ್ವಚ್ಛಗೊಳಿಸಲು ಬಾಗಿಲು ತೆಗೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಳಿಕ ಈ ವಿಷಯವನ್ನು ದೇವಾಲಯದ ಅರ್ಚಕ ಶೇಷುಸ್ವಾಮಿಗೆ ತಿಳಿಸಿದ್ದಾರೆ. ಆನಂತರ ದೂರು ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.