ಬೆಂಗಳೂರು: ಮಾಲೀಕರ ಕುಟುಂಬದ ಮದುವೆ ಸಮಾರಂಭಗಳಲ್ಲಿ ಧರಿಸಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದ ಕಾರು ಚಾಲಕನು ಕನ್ನ ಹಾಕಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಅಭಿಲಾಶ್ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ ಹತ್ತು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದನು. ಕಳೆದ ಎರಡು ವರ್ಷಗಳಿಂದ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.
ಕೆಲಸದ ಹಿನ್ನೆಲೆಯಲ್ಲಿ ಮಾಲೀಕರ ಕುಟುಂಬದ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಅಭಿಲಾಶ್, ಆ ಸಂದರ್ಭಗಳಲ್ಲಿ ಮನೆ ಮಾಲೀಕರು ಮತ್ತು ಅವರ ಸಂಬಂಧಿಕರು ಧರಿಸುತ್ತಿದ್ದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಗಮನಿಸುತ್ತಿದ್ದನು. ಪದೇ ಪದೇ ಆಭರಣಗಳನ್ನು ನೋಡಿ ಕಳ್ಳತನ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಐಷಾರಾಮಿ ಜೀವನ ನಡೆಸಬೇಕೆಂಬ ಉದ್ದೇಶದಿಂದ ಆರೋಪಿ ಕಳ್ಳತನಕ್ಕೆ ಮುಂದಾಗಿದ್ದನು. ಮನೆ ಮಾಲೀಕರು ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು, ಮದನ್ ಕುಮಾರ್ ಎಂಬಾತನೊಂದಿಗೆ ಸೇರಿ ಮಾಲೀಕರ ಸಂಬಂಧಿಕರ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ.
ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ಅಭಿಲಾಶ್ ಅನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 13.30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿ ಮದನ್ ಕುಮಾರ್ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಸ್ನೇಹಿತನ ಮನೆಯಲ್ಲೇ ರಾಬರಿ ಕೇಸ್‌ಗೆ ಸ್ಪೋಟಕ ಟ್ವಿಸ್ಟ್ – ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ



















