ಹಾಸನ: ಇತ್ತೀಚೆಗಷ್ಟೇ ಹಸುಗಳ ಕೆಚ್ಚಲು ಹಾಗೂ ಬಾಲ ಕತ್ತರಿಸಿರುವ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕರು(Cow)ವೊಂದನ್ನು ಕದ್ದು ಬಾಡೂಟ ಮಾಡಿರುವ ಪ್ರಕರಣ ನಡೆದಿದೆ.
ಈ ಘಟನೆ ಹಾಸನದಲ್ಲಿ (Hassan) ಜಿಲ್ಲೆಯ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿ ತಿಂದು ತೇಗಿದ್ದಾರೆ. ಖದೀಮರು ಮಂಗಳವಾರವೇ ಈ ಹಸುವನ್ನು ಕಳ್ಳತನ ಮಾಡಿದ್ದರು.
ಹಸು ಕಾಣದಾದಾಗ ಮಾಲೀಕರು ಹುಡುಕಾಟ ನಡೆಸಿದ್ದಾರೆ. ಆಗ ಮಡಬಲು ಗ್ರಾಮದ ರೈಲ್ವೆ ಗೇಟ್ ಹತ್ತಿರ ಕರುವಿನ ರುಂಡ ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಮಾಲೀಕರು, ದೂರು ದಾಖಲಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಕದ್ದಿರುವುದು ಗೊತ್ತಾಗಬಾರದು ಎಂಬ ಕಾರಣಕ್ಕೆ ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಮುಂದಾಗಿದ್ದರು ಎನ್ನಲಾಗಿದೆ.