ತಿರುವನಂತಪುರಂ: ಜನವರಿ 31ರಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಟಿ20 ಪಂದ್ಯದ ವೇಳೆ, ಪ್ರೇಕ್ಷಕರಿಗೆ ಕುಡಿಯುವ ನೀರನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ದೂರುಗಳು ವ್ಯಕ್ತವಾದ ಬೆನ್ನಲ್ಲೇ ಕೇರಳ ಕ್ರಿಕೆಟ್ ಸಂಸ್ಥೆ (KCA) ಎಚ್ಚೆತ್ತುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಪಂದ್ಯದ ವೇಳೆ ಕೆಲವು ವಿಭಾಗಗಳಲ್ಲಿನ ಕಿಯೋಸ್ಕ್ ಗಳಲ್ಲಿ (Kiosks) ಕುಡಿಯುವ ನೀರು ಮತ್ತು ಎನರ್ಜಿ ಡ್ರಿಂಕ್ಸ್‌ಗಳನ್ನು ನಿಗದಿಗಿಂತ ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಅಭಿಮಾನಿಗಳು ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಸಿಸಿಐ ಮತ್ತು ಪಾನೀಯ ಪ್ರಾಯೋಜಕರ ನಡುವಿನ ಒಪ್ಪಂದದ ಪ್ರಕಾರ, 200 ಮಿ.ಲೀ. ನೀರಿನ ಬಾಟಲಿಗೆ 10 ರೂ. ಮತ್ತು 250 ಮಿ.ಲೀ. ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್ಸ್‌ಗೆ 50 ರೂ. ದರ ನಿಗದಿಪಡಿಸಲಾಗಿತ್ತು.
ಅಲ್ಲದೆ, ಈ ದರಪಟ್ಟಿಗಳನ್ನು ಕಿಯೋಸ್ಕ್ ಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು ಮತ್ತು ಪರಿಸರ ಸ್ನೇಹಿ ‘ಗ್ರೀನ್ ಪ್ರೋಟೋಕಾಲ್’ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ನಿಯಮವಿತ್ತು. ಆದರೆ, ಮೈದಾನದ ಕೆಲವು ಕಡೆ ಈ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚಿನ ದರ ವಸೂಲಿ ಮಾಡಲಾಗಿದೆ ಎಂಬುದು ಪ್ರೇಕ್ಷಕರ ಆರೋಪ.
ಕೆಸಿಎ ಕ್ರಮವೇನು?
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಕ್ರಿಕೆಟ್ ಸಂಸ್ಥೆ, ಈ ಬಗ್ಗೆ ತನಿಖೆಗೆ ಆದೇಶಿಸಿದೆ. “ಅಭಿಮಾನಿಗಳಿಗೆ ಆದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಗುತ್ತಿಗೆ ಪಡೆದ ಏಜೆನ್ಸಿಯ ಕಡೆಯಿಂದ ಲೋಪವಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಬಿಸಿಸಿಐ (BCCI) ಗಮನಕ್ಕೆ ತರಲಾಗಿದ್ದು, ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ,” ಎಂದು ಕೆಸಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ವಹಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.
ಪಂದ್ಯದ ಫಲಿತಾಂಶ
ವಿವಾದದ ನಡುವೆಯೂ, ಮೈದಾನದಲ್ಲಿ ಟೀಂ ಇಂಡಿಯಾ ಅಬ್ಬರಿಸಿತ್ತು. ಇಶಾನ್ ಕಿಶನ್ ಅವರ ಸಿಡಿಲಬ್ಬರದ ಚೊಚ್ಚಲ ಶತಕ (43 ಎಸೆತಗಳಲ್ಲಿ 103 ರನ್) ಹಾಗೂ ಅರ್ಷದೀಪ್ ಸಿಂಗ್ ಅವರ ಐದು ವಿಕೆಟ್ ಸಾಧನೆಯ (5/51) ನೆರವಿನಿಂದ ಭಾರತ 46 ರನ್‌ಗಳ ಜಯ ಸಾಧಿಸಿತ್ತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 4-1 ಅಂತರದಲ್ಲಿ ಭಾರತ ವಶಪಡಿಸಿಕೊಂಡಿದೆ.
ಇದನ್ನೂ ಓದಿ : 2026 ಟಿ20 ವಿಶ್ವಕಪ್ | ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ 2,200 ಕೋಟಿ ರೂ. ನಷ್ಟ


















