ಬೆಂಗಳೂರು: ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 24 ವರ್ಷ ವಿದ್ಯಾರ್ಥಿ ನಿಫಾಗೆ ಬಲಿಯಾಗಿದ್ದಾನೆ. ಈ ವಿದ್ಯಾರ್ಥಿಯನ್ನು ಮಲಪ್ಪುರಂ ಮೂಲದವನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗೆ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ಎಆರ್‌ಡಿಎಸ್) ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯ ರಕ್ತ ಹಾಗೂ ಸಿರಂ ಸ್ಯಾಂಪಲ್ ನಲ್ಲಿ ನಿಫಾ ಪಾಸಿಟಿವ್ ಕಂಡು ಬಂದಿದೆ. ಈ ವಿದ್ಯಾರ್ಥಿ ಕಳೆದ ವಾರವೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಆತ ಮರಳಿ ಕೇರಳಕ್ಕೆ ಹೋಗಿದ್ದ. ಅಲ್ಲಿಗೆ ಹೋಗುತ್ತಿದ್ದಂತೆ ಆತನಿಗೆ ಜ್ವರ ಕಾಣಿಸಿಕೊಂಡಿದೆ. ಕಾಲಿನ ನೋವಿನಿಂದ ಜ್ವರ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆದರೆ, ಜ್ವರ ಹೆಚ್ಚಾಗಿದೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ವಿದ್ಯಾರ್ಥಿ ನಿಫಾಗೆ ಬಲಿಯಾಗುತ್ತಿದ್ದಂತೆ ಕರ್ನಾಟಕ ಹಾಗೂ ಕೇರಳದಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ಕರ್ನಾಟಕದಲ್ಲಿ ನಿಫಾಗೆ ಸಾವನ್ನಪ್ಪಿದ ವಿದ್ಯಾರ್ಥಿಯ ಸಂಪರ್ಕಕ್ಕೆ ಬಂದವರ ಕುರಿತು ಎಚ್ಚರ ವಹಿಸಲು ಸೂಚಿಸಲಾಗಿದೆ.
ವಿದ್ಯಾರ್ಥಿ ಸಂಪರ್ಕಕ್ಕೆ ಬಂದ 70 ಪ್ರಾಥಮಿಕ ಸಂಪರ್ಕಿತರು ಕೇರಳದವರು ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ರಾಜ್ಯದಲ್ಲಿ ನಿಫಾ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.