ದೇವನಹಳ್ಳಿ : ಬ್ಯಾಂಕಾಕ್‌ನಿಂದ ಬುಧವಾರ ತಡರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರ ಬಳಿ 4 ಕೆ.ಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ 4 ಕೋಟಿ ಎಂದು ಅಂದಾಜಿಸಲಾಗಿದೆ.
ಬ್ಯಾಂಕಾಕ್‌ನಿಂದ ಹಾಂಕಾಂಗ್ ಮಾರ್ಗವಾಗಿ ಬಂದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಹೈಡ್ರೋ ಗಾಂಜಾ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇತ್ತು. ಹೀಗಾಗಿ ವೈಮಾನಿಕ ಗುಪ್ತಚರ ದಳ ಸಿಬ್ಬಂದಿ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯ ಬ್ಯಾಗ್, ಸೂಟ್‌ಕೇಸ್ ಪರಿಶೀಲಿಸಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ.
ಮಹಿಳೆಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಆಕೆಯ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ಕೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇವಲ ಎರಡು ದಿನದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ.