ಮೈಸೂರು: ಹಿಂದುಳಿದ ವರ್ಗದ ಸಿದ್ದರಾಮಯ್ಯ (Siddaramaiah) ಎರಡನೇ ಬಾರಿ ಸಿಎಂ ಆಗಿದ್ದನ್ನು ಹಲವರಿಗೆ ಸಹಿಸಲು ಆಗುತ್ತಿಲ್ಲ ಎಂದು ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಿಯೇ ಕೆಲವರು ಹೊಟ್ಟೆಕಿಚ್ಚಿನಿಂದಾಗಿ ಸುಮ್ಮಸುಮ್ಮನೆ ಆರೋಪ ಮಾಡ್ತಿದ್ದಾರೆ. ಇಷ್ಟು ವರ್ಷ ಆದರೂ ನನ್ನ ವಿರುದ್ಧ ಆರೋಪ ಮಾಡಲು ಅವರಿಗೆ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನ ಅಕ್ರಮ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನನ್ನನ್ನು ಹೆದರಿಸಲು ಸಾಧ್ಯವೂ ಇಲ್ಲ. ಏಕೆಂದರೆ ನಾನು ಪ್ರಾಮಾಣಿಕ ಎಂದು ಹೇಳಿದ್ದಾರೆ.
ಮುಡಾ ಗೆಬ್ಬೆದ್ದು ಹೋಗಿದೆ. ಈಗ ಅದನ್ನು ಸ್ವಚ್ಛ ಮಾಡುವ ಕಾಲ ಬಂದಿದೆ. ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ನಾನು ಒಪ್ಪಕೊಳ್ತೀನಿ. ಆದರೆ, ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಮ್ಮ ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರ ಇಟ್ಟುಕೊಂಡು ಬೇರೆ ಅಕ್ರಮ ಮಾಡಲು ಸಾಧ್ಯವಿಲ್ಲ. ನಮ್ಮ ವಿಷಯ ಅಕ್ರಮ ಅಲ್ಲವೇ ಅಲ್ಲ. ಈಗ ನಡೆದಿರುವ ಪ್ರಕರಣಗಳೇ ಬೇರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಡಾ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ರಾಜಕೀಯ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ರಾಜಕೀಯ ಮಾಡುವುದಾದರೇ ನಾವು ರಾಜಕೀಯವಾಗಿ ಹೆದರಿಸುತ್ತೇನೆ. ನೋಡ್ತಾ ಇರಿ. ರಾಜಕೀಯವಾಗಿ ಅದಕ್ಕೆ ಉತ್ತರ ಹೇಗೆ ಕೊಡತ್ತೇನಿ ಅಂತಾ ಎಂದು ಹೇಳಿದ್ದಾರೆ.