ಚಳಿಗಾಲ ಅಂತ್ಯವಾಗುತ್ತಿದ್ದಂತೆ ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಕೇದಾರನಾಥ ದೇಗುಲದ ಬಾಗಿಲುಗಳನ್ನು ತೆರೆಯಲಾಗಿದೆ.
ಶುಕ್ರವಾರದ ಶುಭ ಮುಹೂರ್ತದಲ್ಲಿ ಪವಿತ್ರ ಕ್ಷೇತ್ರದ ಬಾಗಿಲನ್ನು ತೆರೆಯಲಾಗಿದೆ. ವಿಶೇಷವೆಂದರೆ ಇಂದು ದೇಗುಲವನ್ನು ವಿವಿಧ ಬಗೆಯ ದೇಶ ವಿದೇಶಗಳ ಹತ್ತಾರು ಬಗೆಯ 108 ಕ್ವಿಂಟಲ್ ಹೂವಿನಿಂದ ಸಿಂಗರಿಸಲಾಗಿದೆ. 150ಕ್ಕೂ ಹೆಚ್ಚು ಸ್ವಯಂ ಸೇವಕರು ಈ ಅಲಂಕಾರಿಕ ಕಾರ್ಯವನ್ನು ಮಾಡಿದ್ದಾರೆ.
ಗುಲಾಬಿ, ಸೇವಂತಿಗೆ, ಸೇರಿ ಒಟ್ಟು 54 ವಿವಿಧ ಬಗೆಯ ಹೂಗಳಿಂದ ಮಂದಿರವನ್ನು ಶೃಂಗರಿಸಲಾಗಿದೆ. ಭಾರತವಷ್ಟೇ ಅಲ್ಲದೆ ನೆರೆಯ ನೇಪಾಳ, ಥಾಯ್ಲೆಂಡ್ ಹಾಗೂ ಶ್ರೀಲಂಕಾದಿಂದಲೂ ಹೂಗಳನ್ನು ತರಲಾಗಿದೆ. ಚಳಿಗಾಲದಲ್ಲಿ ಕೇದಾರನಾಥದ ಶಿವನ ವಿಗ್ರಹವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇಗುಲದಲ್ಲಿ ಇರಿಸಲಾಗುತ್ತದೆ.
ಚಳಿಗಾಲ ಅಂತ್ಯವಾಗುತ್ತಿದ್ದಂತೆ ಗೌರಿಕುಂಡ್ ಹಾದಿಯಲ್ಲಿ ದೇಗುಲದ ಆಡಳಿತ ಮಂಡಳಿ ಸದಸ್ಯರು, ವಿಗ್ರಹವನ್ನು ಭುಜದ ಮೇಲೆ ಹೊತ್ತು ಕೇದಾರನಾಥಕ್ಕೆ ತಂದು ಸ್ಥಾಪಿಸ್ತಾರೆ. ಇನ್ನು ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆಚರಣೆಗಳು ಆರಂಭವಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಿದ್ದಾರೆ.