ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಕಳ್ಳಿ, ನೆಕ್ಲೆಸ್ (Necklace) ಧರಿಸಿದ ಫೋಟೋವನ್ನು ವಾಟ್ಸಪ್ ಡಿಪಿಗೆ (Whatsapp DP) ಹಾಕಿ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ರೇಣುಕಾ (38) ಬಂಧಿತ ಆರೋಪಿ. ಹೆಚ್‌ಎಎಲ್ ಪೊಲೀಸರು ರೇಣುಕಾಳನ್ನು ಬಂಧಿಸಿ ಚಿನ್ನಾಭರಣ (Gold) ವಶಕ್ಕೆ ಪಡೆದಿದ್ದಾರೆ. ಬಂಧಿತ ರೇಣುಕಾ ಅಪಾರ್ಟ್ ಮೆಂಟ್ ಬಳಿ ತೆರಳಿ, ನನಗೆ ಅಡುಗೆ ಮಾಡಲು ಬರುತ್ತದೆ. ದಕ್ಷಿಣ-ಉತ್ತರ ಭಾರತ ಸೇರಿದಂತೆ ಎಲ್ಲ ಶೈಲಿಯ ಅಡುಗೆ ಮಾಡುತ್ತೇನೆಂದು ಮಾರತ್ತಳ್ಳಿ ಪೂರ್ವ ಪೌಂಟೇನ್ ಅಪಾರ್ಟ್ಮೆಂಟ್ ನ ಎರಡು ಫ್ಲ್ಯಾಟ್ ಗಳಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಆನಂತರ ಎರಡೂ ಮನೆಗಳಲ್ಲಿ ತನ್ನ ಕೈಚಳಕ ತೋರಿಸಿ ಸುಮಾರು 100 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಚಿನ್ನದ ಆಸೆಗೆ ಕೆಲಸ ಮಾಡುತ್ತಿದ್ದ ಈಕೆ ಮನೆ ಒಡತಿಯ ತಾಳಿಯನ್ನೂ ದೋಚಿದ್ದಾಳೆ.
ಹೀಗಾಗಿ ಮನೆಯ ಮಾಲೀಕರು ಈ ಮಹಿಳೆಯ ಮೇಲೆ ಸಂಶಯಪಟ್ಟು ದೂರು ದಾಖಲಿಸಿದ್ದರು. ಆನಂತರ ಪೊಲೀಸರು ವಿಚಾರಣೆ ನಡೆಸಿದಾಗ ಸಭ್ಯಸ್ಥಳಂತೆ ವರ್ತಿಸಿದ್ದಾಳೆ. ಆನಂತರ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿದ್ದರು. ಆಂತರ ಕದ್ದ ನೆಕ್ಲೆಸ್‌ನ್ನು ಧರಿಸಿ ಪೋಟೋ ತೆಗೆದುಕೊಂಡು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದಾಳೆ.
ವಾಟ್ಸಪ್ ಡಿಪಿಯನ್ನು ಗಮನಿಸಿದ ಫ್ಲ್ಯಾಟ್ ಮಾಲೀಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ. ಪೊಲೀಸರು ಬಂಧಿತಳಿಂದ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.