ಪಾಕಿಸ್ತಾನದಲ್ಲಿ ಕಾಶ್ಮೀರ ದಾಳಿಯ ಮಾಸ್ಟರ್ ಮೈಂಡ್ ಅಬು ಕತಲ್ ಹತ್ಯೆ: ಅನಾಮಿಕರಿಂದ ಕೃತ್ಯ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಉಗ್ರರ ಹತ್ಯೆ ಮುಂದುವರಿದಿದೆ. ಜಮ್ಮು-ಕಾಶ್ಮೀರದಲ್ಲಿ ಹಲವು ದಾಳಿಗಳ ರೂವಾರಿ, ಲಷ್ಕರೆ ತಯ್ಬಾದ ಮೋಸ್ಟ್ ವಾಂಟೆಡ್ ಉಗ್ರ ಅಬು ಕತಾಲ್ ಹತ್ಯೆಗೀಡಾಗಿದ್ದಾನೆ. ಶನಿವಾರ ರಾತ್ರಿ ಜೇಲಂ ಪ್ರದೇಶದಲ್ಲಿ ಉಗ್ರನನ್ನು ಹತ್ಯೆಗೈಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಅಬು ಕತಾಲ್ ನಿಜವಾದ ಹೆಸರು ಜಿಯಾ ಉರ್ ರೆಹಮಾನ್ ಆಗಿದ್ದು, ಈತನು ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ತೆರಳುವಾಗ ಅನಾಮಧೇಯ ವ್ಯಕ್ತಿಗಳು ಗುಂಡಿನ ಸುರಿಮಳೆಗೈದಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ 15-20 ಸುತ್ತು ಗುಂಡು ಹಾರಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬು ಕತಾಲ್ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಮುಂಬೈನ 26/11ರ ದಾಳಿಯ ರೂವಾರಿಯಾದ ಹಫೀಜ್ ಸಯೀದ್ ಗೆ ಈತನು ಆಪ್ತನಾಗಿದ್ದ. ಜಮ್ಮು-ಕಾಶ್ಮೀರದ ರಜೌರಿ ಸೇರಿ ಹಲವೆಡೆ ನಡೆದ ಭೀಕರ ದಾಳಿಗಳಿಗೆ ಈತನೇ ರೂವಾರಿಯಾಗಿದ್ದ. ಈತನ ವಿರುದ್ಧ ಎನ್ಐಎ ಹಲವು ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಅಬು ಕತಾಲ್ ಗೆ ಲಷ್ಕರೆ ತಯ್ಬಾ ಉಗ್ರರು ಮಾತ್ರವಲ್ಲ, ಪಾಕಿಸ್ತಾನ ಸೇನೆಯ ಭದ್ರತೆಯನ್ನೂ ಒದಗಿಸಲಾಗಿತ್ತು. ಇಷ್ಟೆಲ್ಲ ಭದ್ರತೆಯನ್ನು ಮೀರಿ ಅನಾಮಧೇಯ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಕಾಶ್ಮಿರದಲ್ಲಿ ಹಿಂದು ಯಾತ್ರಿಕರು, ಪ್ರವಾಸಿಗರು ಹಾಗೂ ಭದ್ರತಾ ಸಿಬ್ಬಂದಿಯೇ ಈತನ ಗುರಿಯಾಗಿದ್ದರು. ಕಳೆದ ವರ್ಷದ ಜೂನ್ ನಲ್ಲಿ ರಿಯಾಸಿಯಲ್ಲಿ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿಯ ಹಿಂದೆ ಈತನ ಕೈವಾಡವಿತ್ತು ಎನ್ನಲಾಗಿದೆ.