ಚೆನ್ನೈ : ಕರೂರು ಕಾಲ್ತುಳಿತ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ತಮಿಳಗ ವೆಟ್ರಿ ಕಳಗಂ ಪಕ್ಷ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ವಕೀಲರಾದ ದೀಕ್ಷಿತಾ ಗೋಹಿಲ್, ಪ್ರಾಂಜಲ್ ಅಗರ್ವಾಲ್ ಮತ್ತು ಯಶ್ ಎಸ್ ವಿಜಯ್ ಅವರು ಅರ್ಜಿ ಸಲ್ಲಿಸಿದ್ದು, ಪೊಲೀಸ್ ನೇತೃತ್ವದ ಎಸ್‌ಐಟಿ ತನಿಖೆಯ ಬದಲು ಉನ್ನತ ನ್ಯಾಯಲಯದ ನಿವೃತ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆಯ ಸ್ವತಂತ್ರ ತನಿಖೆ ನಡೆಸಲು ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದ್ದು, ಅ.10ರಂದು ವಿಚಾರಣೆ ನಡೆಸುವುದಾಗಿ ದಿನಾಂಕ ನಿಗದಿಪಡಿಸಿದೆ.
ಏನಿದು ಕರೂರು ದುರಂತ? ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ವಿಜಯ್ ಅವರ ಪಕ್ಷವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಏಕಾಏಕಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ ಈ ಘಟನೆ ನಡೆದ ಕಾರಣ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಮಾವೇಶಕ್ಕೆ ಮಧ್ಯಾಹ್ನ 12 ಗಂಟೆಗೆ ಬರಬೇಕಿದ್ದ ವಿಜಯ್, ಸಂಜೆ 7 ಗಂಟೆಗೆ ಆಗಮಿಸಿದ್ದು, ಅವರು ಬರುವಾಗ ಸುಮಾರು ಏಳು ಗಂಟೆಗಳ ಕಾಲ ವಿಳಂಬವಾಗಿದ್ದು, ಕೇವಲ 2,000-3,000 ಜನರಿಗೆ ಮೀಸಲಾಗಿದ್ದ ಸ್ಥಳದಲ್ಲಿ 30,000ಕ್ಕೂ ಹೆಚ್ಚು ಜನರು ಸೇರಿದ್ದು, ವಿಜಯ್ ತಮ್ಮ ಪ್ರಚಾರ ವಾಹನದ ಮೇಲೆ ಹತ್ತಿ ಜನರತ್ತ ಕೈ ಬೀಸಿದಾಗ, ಅವರನ್ನು ನೋಡಲು ಜನಸಮೂಹ ಮುಂದಕ್ಕೆ ನುಗ್ಗಿದ್ದು ಮುಂತಾದ ಹಲವು ಕಾರಣಗಳಿಂದ ಕಾಲ್ತುಳಿತ ಸಂಭವಿಸಿದೆ ಎಂದು ವಿಶ್ಲೇಷಿಸಲಾಗಿದೆ.
Karur stampede case-TVK-Supreme-Court