ನವದೆಹಲಿ : 2025ರ ಸೆಪ್ಟೆಂಬರ್ನಲ್ಲಿ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪ್ರಚಾರ ಸಭೆ ಸಂದರ್ಭದಲ್ಲಿ 41 ಜನರ ಸಾವಿಗೆ ಕಾರಣವಾದ ಭೀಕರ ಕಾಲ್ತುಳಿತ ಘಟನೆಯ ಕುರಿತು ವಿಚಾರಣೆಗೆ ನಟ ಹಾಗೂ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ 2ನೇ ಬಾರಿ ಸಿಬಿಐ ಮುಂದೆ ಹಾಜರಾಗಿದ್ದಾರೆ. ಕಳೆದ ವಾರ ಕೂಡ ನಟ 6 ಗಂಟೆ ವಿಚಾರಣೆ ಎದುರಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಅಧಿಕಾರಿಗಳು ಅಕ್ಟೋಬರ್ನಲ್ಲಿ ತಮಿಳುನಾಡು ಪೊಲೀಸರಿಂದ ಈ ಪ್ರಕರಣವನ್ನು ಪಡೆದು ತನಿಖೆಗೆ ಮುಂದಾಗಿದ್ದಾರೆ. ಅಂದಿನಿಂದ ಕರೂರಿನಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸುತ್ತಲಿನ ಸಂದರ್ಭಗಳನ್ನು ಸಂಸ್ಥೆ ಪರಿಶೀಲಿಸುತ್ತಿದೆ.
ಕರೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ನಿಗದಿಗಿಂತ 7 ಗಂಟೆ ತಡವಾಗಿ ನಟ ವಿಜಯ್ ಆಗಮಿಸಿದ್ದರ ಕುರಿತು ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಟನ ಆಗಮನದ ವೇಳೆಯಲ್ಲಿನ ಈ ಕಾಯುವಿಕೆಯ ಸಂದರ್ಭದಲ್ಲಿ ಜನದಟ್ಟನೆ 10,000ದಿಂದ 30,000ಕ್ಕೆ ಹೆಚ್ಚಾಗಲು ಕಾರಣವೇನು? ಕಾರ್ಯಕ್ರಮದ ನಿಯಂತ್ರಣ ತಪ್ಪಿದ್ದರ ಕಾರಣ ಕುರಿತು ಹೆಚ್ಚಿನ ತನಿಖೆ ಸಾಗಿದೆ.
ಪಕ್ಷದ ಕಾರ್ಯಕರ್ತರು, ಕಾರ್ಯಕ್ರಮದಲ್ಲಿ ಜನ ದಟ್ಟಣೆ ನಿರ್ವಹಣೆಗೆ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದೊಂದಿಗೆ ಸಮರ್ಪಕವಾಗಿ ಸಮನ್ವಯ ಸಾಧಿಸಿದ್ದಾರಾ? ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಬರಲು ಕಾರಣ ಹಾಗೂ ಜನದಟ್ಟಣೆ ಹೆಚ್ಚಳದ ಕುರಿತು ಕಾರ್ಯಕರ್ತರ ನಡೆ ಸೇರಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ತನಿಖಾಧಿಕಾರಿಗಳು ಕಾರ್ಯಕ್ರಮಕ್ಕೆ ಕೋರಿರುವ ಅನುಮತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದು, ಕರೂರಿನಲ್ಲಿ ಕಾರ್ಯಕ್ರಮವನ್ನು ನಡೆಸಲು ಯಾರು ನಿರ್ಧರಿಸಿದರು?, ಈ ಕುರಿತು ವಿಜಯ್‌ಗೆ ಯಾವಾಗ ತಿಳಿಸಲಾಯಿತು? ಎಂಬುದೂ ಸೇರಿದಂತೆ ಸಭೆಯ ಯೋಜನೆ ಮತ್ತು ಕಾರ್ಯಗತಗೊಳಿಸುವ ಜವಾಬ್ದಾರಿಯ ನಿರ್ಧರಿಸಲು ಪಕ್ಷದೊಳಗೆ ಯಾರು ಸಿದ್ಧತೆ ನಡೆಸಿದ್ದರು? ಎಂಬ ಕುರಿತು ಸಿಬಿಐ ಪ್ರಶ್ನಿಸಲಿದೆ.
ಜನದಟ್ಟಣೆ ನಡುವೆಯೂ ವಿಜಯ್ ಕ್ಯಾರವನ್ ಹೇಗೆ ಚಲಿಸಿತು?, ಜಿಲ್ಲಾಡಳಿತದ ಸಮನ್ವಯದೊಂದಿಗೆ ಯಾವುದೇ ಪೂರ್ವ ಅಪಾಯದ ಮೌಲ್ಯಮಾಪನ ನಡೆಸಿರಲಿಲ್ಲವೇ?, ಪ್ರಚಾರ ಸಂಭೆಯಲ್ಲಿ ಜನರಿಗೆ ಮೂಲಭೂತ ಸೌಕರ್ಯವಾದ ಕುಡಿಯುವ ನೀರು ಮತ್ತು ಪ್ರವೇಶ ಮತ್ತು ನಿರ್ಗಮದ ಬಿಂದುಗಳ ವ್ಯವಸ್ಥೆ ಹೇಗೆ ನಡೆಸಲಾಗಿತ್ತು?, ಜನದಟ್ಟಣೆ ನಡುವೆ ಕ್ಯಾರವನ್ ಮೇಲೆ ನಿಂತು ವಿಜಯ್ ಭಾಷಣೆ ಹೇಗೆ ನಡೆಸಿದ್ದರು ಎಂಬ ಕುರಿತು ಸಂಪೂರ್ಣ ಕೂಲಂಕಷ ತನಿಖೆ ಸಾಗುತ್ತಿದೆ.
ಇದನ್ನೂ ಓದಿ : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರು ಪರದಾಟ



















