ಸಮಾಜ ಸೇವೆ, ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡಿರುವ ರಾಜ್ಯ ವಿಕಲಚೇತನ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ಎಸ್. ರಾಜಣ್ಣ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು (Bengaluru University) ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸಮಾಜ ಸೇವಕ ಕೆಎಸ್ ರಾಜಣ್ಣ ಅವರು ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಪೋಲಿಯೋದಿಂದಾಗಿ ಎರಡೂ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿರುವ ಕೆ.ಎಸ್. ರಾಜಣ್ಣ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದ ಕ್ಷಣ ಸ್ಮರಣೀಯವಾಗಿತ್ತು. ಅವರು ಪ್ರಶಸ್ತಿ ಸ್ವೀಕರಿಸಿದ್ದ ವಿಡಿಯೋ ಇಡೀ ದೇಶದ ಗಮನ ಸೆಳೆದಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜಣ್ಣ ಅವರ ಸಮಾಜ ಸೇವೆ ಮೆಚ್ಚಿ ಕೊಂಡಾಡಿದ್ದರು.

ಅಂದು ರಾಜಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ ರೀತಿ ಇಡೀ ದೇಶದ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ಕಂಡು ಅಲ್ಲಿದ್ದ ಕಣ್ಣುಗಳು ತೇವಗೊಂಡಿದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಇಂದಿಗೂ ಶೇರ್ ಆಗುತ್ತಿದೆ. ಇಂದಿಗೂ ಜನರ ಮೆಚ್ಚುಗೆ ಗಳಿಸುತ್ತಿದೆ. ಸದ್ಯ ಈ ಸಮಾಜ ಸೇವಕನಿಗೆ ಗೌರವ ಡಾಕ್ಟರೇಟ್ ಒಲಿದು ಬಂದಿದೆ. ಇವರೊಂದಿಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ರಾಜಣ್ಣ ಅವರು 11 ತಿಂಗಳ ಮಗುವಾಗಿದ್ದಾಗ ಪೋಲಿಯೋದಿಂದ ತಮ್ಮ ಎರಡೂ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದರು. ಆದರೂ ಸಾಧನೆಗೆ ಆತ್ಮಸ್ಥೈರ್ಯ ಒಂದೇ ಬೇಕೆಂದು ತಿಳಿದುಕೊಂಡಿದ್ದ ಅವರು ಕೊರತೆಗಳನ್ನೆಲ್ಲ ಮೆಟ್ಟಿಲಾಗಿಸಿಕೊಂಡು ಮೆಕ್ಯಾನಿಕಲ್ ಇಂಜನೀಯರ್ ಪದವಿ ಪಡೆದರು. ಆನಂತರ ಉದ್ಯಮಿಯಾಗಿ ಬೆಳೆದು ನಿಂತು, ತಮ್ಮಂತೆ ಇರುವ ಹಲವಾರು ಜನರಿಗೆ ಊರುಗೋಲಾಗಿ ನಿಂತರು. ಸುಮಾರು 350ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿ, ಅನ್ನದಾತರಾಗಿದ್ದಾರೆ.
ಅಷ್ಟೇ ಅಲ್ಲ, ಅಂಗವೈಕಲ್ಯದ ಮಧ್ಯೆಯೂ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸಾಧನೆಯನ್ನು ಮೇಲಕ್ಕೆ ಎತ್ತಿ ನಿಲ್ಲಿಸಿದ್ದರು. 2002ರ ಪ್ಯಾರಾ ಒಲಿಂಪಿಕ್ಸ್ ನಲ್ಲಿ ರಾಜಣ್ಣ ಅವರು ಡಿಸ್ಕಸ್ ಥ್ರೋದಲ್ಲಿ ಚಿನ್ನ ಹಾಗೂ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರ ಈ ಎಲ್ಲ ಸಾಧನೆಗಳನ್ನು ಕಂಡು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಈಗ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಂಡ್ಯ ಜಿಲ್ಲೆಯವರಾದ ರಾಜಣ್ಣ ನಮ್ಮ ಕರುನಾಡಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಿ ನಿಂತವರು. ಇಂತಹ ವ್ಯಕ್ತಿಗೆ ಇಂದು ಗೌರವ ಡಾಕ್ಟರೇಟ್ ಹುಡುಕಿಕೊಂಡು ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಗೈರಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷರಾದ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಭಾಗವಹಿಸಿದ್ದರು.
ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದರು. 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. 21,853 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದು, 5,861 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1,289 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ. 308 ಚಿನ್ನದ ಪದಕಗಳನ್ನು (Gold Medal) ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. 79 ನಗದು ಬಹುಮಾನ ಹಾಗೂ 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು.