ಬೆಂಗಳೂರು: ಎಂಟು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತ ತಂಡಕ್ಕೆ ಯಶಸ್ವಿಯಾಗಿ ಪುನರಾಗಮನ ಮಾಡಿದ ತಮ್ಮ ಆಪ್ತ ಗೆಳೆಯ ಹಾಗೂ ಕರ್ನಾಟಕದ ಸಹ ಆಟಗಾರ ಕರುಣ್ ನಾಯರ್ ಅವರ ಬಗ್ಗೆ ಹಿರಿಯ ಆಟಗಾರ ಮನೀಶ್ ಪಾಂಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಕಠಿಣ ಸಮಯವನ್ನು ದಾಟಿ ಬಂದಿರುವ ಕರುಣ್, ಇದೀಗ ಕ್ರಿಕೆಟಿಗನಾಗಿ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ 2025ರಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಆಡುತ್ತಿರುವ ಮನೀಶ್ ಪಾಂಡೆ, ತಮ್ಮ ತಂಡದ ನಾಯಕನೂ ಆಗಿರುವ ಕರುಣ್ ನಾಯರ್ ಅವರ ಹೋರಾಟದ ಹಾದಿಯನ್ನು ಶ್ಲಾಘಿಸಿದ್ದಾರೆ.
ಗೆಳೆಯನ ಕಮ್‌ಬ್ಯಾಕ್‌ಗೆ ಪಾಂಡೆ ಸಂತಸ
‘ಇನ್‌ಸೈಡ್‌ಸ್ಪೋರ್ಟ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮನೀಶ್ ಪಾಂಡೆ, “ಒಬ್ಬ ಸ್ನೇಹಿತನು ಅತ್ಯುನ್ನತ ಮಟ್ಟದಲ್ಲಿ ಆಡಿ, ಮಧ್ಯದಲ್ಲಿ ಕಠಿಣ ಸಮಯವನ್ನು ಎದುರಿಸಿ, ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ನಂಬಲಸಾಧ್ಯವಾದಷ್ಟು ರನ್ ಗಳಿಸಿ ಮತ್ತೆ ತಂಡಕ್ಕೆ ಮರಳಿರುವುದು ಸ್ಪೂರ್ತಿದಾಯಕ. ಅವನಿಗಾಗಿ ನನಗೆ ತುಂಬಾ ಸಂತೋಷವಿದೆ. ಪ್ರತಿಯೊಬ್ಬ ಆಟಗಾರನಿಗೂ ಇಂತಹದ್ದೇ ಅವಕಾಶ ಸಿಗಲಿ ಎಂದು ನಾನು ಹಾರೈಸುತ್ತೇನೆ,” ಎಂದು ಹೇಳಿದರು.
“ಕಳೆದ ಎರಡು ವರ್ಷಗಳಲ್ಲಿ ಕರುಣ್ ತಮ್ಮ ಕ್ರಿಕೆಟ್ ಬದುಕನ್ನು ಅದ್ಭುತವಾಗಿ ಬದಲಿಸಿಕೊಂಡಿದ್ದಾರೆ. ಒಬ್ಬ ಕ್ರಿಕೆಟಿಗನಾಗಿ ನೀವು ಇರಲು ಬಯಸುವ ಅತ್ಯುತ್ತಮ ಜಾಗದಲ್ಲಿ (very good spot) ಅವರಿದ್ದಾರೆ,” ಎಂದು ಮನೀಶ್ ಶ್ಲಾಘಿಸಿದರು.
ಯದಿಂದ ಚೇತರಿಸಿಕೊಳ್ಳುತ್ತಿರುವ ಕರುಣ್
ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಭಾರತ ತಂಡಕ್ಕೆ ಮರಳಿದ್ದ ಕರುಣ್ ನಾಯರ್, ನಾಲ್ಕು ಟೆಸ್ಟ್‌ಗಳಲ್ಲಿ ಒಂದು ಅರ್ಧಶತಕದೊಂದಿಗೆ 205 ರನ್ ಗಳಿಸಿದ್ದರು. ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸುತ್ತಿರುವ 33 ವರ್ಷದ ಕರುಣ್, ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯದಿಂದ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲು ಕಾಯುತ್ತಿದ್ದಾರೆ.



















