ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಮೈಸೂರಿನ ಸಂಸದರಾಗಿದ್ದ ಸಿ.ಎಚ್ ವಿಜಯ್ ಶಂಕರ್ ಅವರು ರಾಣೆ ಬೆನ್ನೂರು ಮೂಲದವರು. 1994ರಿಂದ 98ರವರೆಗೆ ಮೊದಲ ಬಾರಿಗೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2010ರಿಂದ 16ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು, 2010ರಲ್ಲಿ ರಾಜ್ಯ ಮಂತ್ರಿ ಮಂಡಲದ ಸಚಿವರಾಗಿದ್ದರು.
ಈಗ ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ, ಜಾರ್ಖಂಡ್, ಮೇಘಾಲಯ ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಈ ರಾಜ್ಯಪಾಲರ ಹೆಸರುಗಳಲ್ಲಿ ವಿಜಯಶಂಕರ್ ಅವರ ಹೆಸರು ಕೂಡ ಇದೆ.
ತೆಲಂಗಾಣ ಹಾಗೂ ಜಾರ್ಖಂಡ್ನ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ನೇಮಿಸಲಾಗಿದೆ. ಹರಿಬಾವ್ ಕಿಶನ್ ಬಾವ್ ಬಾಗಡೆ ರನ್ನು ರಾಜಸ್ಥಾನಕ್ಕೆ , ಸಂತೋಷ್ ಕುಮಾರ್ ಗಂಗ್ವಾರ್ ಜಾರ್ಖಂಡ್ಗೆ ನೇಮಕಗೊಂಡಿದ್ದಾರೆ. ರಾಮನ್ ಡೇಕಾ ಅವರನ್ನು ಛತ್ತೀಸ್ಗಢ ರಾಜ್ಯಪಾಲರಾಗಿ, ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರಾಗಿ, ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂ ರಾಜ್ಯಪಾಕರಾಗಿ ನೇಮಿಸಲಾಗಿದೆ.
ಅಸ್ಸಾಂನ ಹಾಲಿ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರಾಗಿ, ಜೊತೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಯಾಗಿ ನೇಮಿಸಲಾಗಿದೆ. ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ನೇಮಿಸಿದ್ದು, ಇವರಿಗೆ ಮಣಿಪುರದ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ ಕೆ.ಕೈಲಾಸನಾಥನ್ ಅವರನ್ನು ಪುದುಚೇರಿಯ ಉಪರಾಜ್ಯಪಾಲರಾಗಿ ನೇಮಕ ಹೊಂದಿದ್ದಾರೆ. ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.