ಬೆಂಗಳೂರು : ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದ್ದು, ಕರ್ನಾಟಕದ ರಾಜಭವನವನಕ್ಕೂ ಸಹ ಹೊಸ ಹೆಸರು ನಾಮಕರಣ ಮಾಡಲಾಗಿದೆ.
ಹೌದು.. ಬೆಂಗಳೂರಿನಲ್ಲಿರುವ ರಾಜ್ಯಪಾಲರ ನಿವಾಸ ರಾಜ ಭವನಕ್ಕೆ ‘ಲೋಕ ಭವನ ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಈ ಹೊಸ ಹೆಸರು ತಕ್ಷಣದಿಂದಲೇ ಅನ್ವಯವಾಗಲಿದ್ದು, ಇನ್ಮುಂದೆ ಅಧಿಕೃತವಾಗಿ ‘ಲೋಕ ಭವನ ಕರ್ನಾಟಕ’ ಎಂದೇ ಕರೆಯಲಾಗುತ್ತದೆ.
ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬುಧವಾರ ಪತ್ರ ಬರೆದಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್, ಹೆಸರು ಬದಲಾವಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್ಸೈಟ್ಗಳು ಹಾಗೂ ಫಲಕಗಳಲ್ಲಿ ರಾಜಭವನ ಕರ್ನಾಟಕ ಬದಲು ಲೋಕಭವನ ಕರ್ನಾಟಕ ಅಂತ ಬಳಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೆಸರು ಬದಲಾವಣೆಗೆ ಕಾರಣವೇನು?
ಈ ನಾಮಕರಣದ ಹಿಂದಿನ ಕಾರಣ ಏನಂದ್ರೆ, ಬ್ರಿಟಿಷ್ ಶೈಲಿಯನ್ನು ಪ್ರತಿಬಿಂಬಿಸುವ ರಾಜಭವನಗಳು ಭಾರತದಲ್ಲಿ ರಾಜ್ಯಪಾಲರ ಅಧಿಕಾರ, ವೈಭವ ಮತ್ತು ಆಡಳಿತದ ಶ್ರೀಮಂತಿಕೆಯನ್ನು ಸೂಚಿಸುತ್ತವೆ. ಆದರೆ, ಕೇಂದ್ರ ಸರ್ಕಾರವು ಈ ಭವನಗಳು ಸಾರ್ವಜನಿಕರಿಗೂ ಮುಕ್ತವಾಗಿದ್ದು, ಮಾನವೀಯತೆಯನ್ನು ಪ್ರತಿಬಿಂಬಿಸಬೇಕು ಎಂಬ ದೃಷ್ಟಿಯಿಂದ “ಲೋಕಭವನ” ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.
‘ಲೋಕಭವನ’ ಎಂದು ಮರುನಾಮಕರಣ ಮಾಡುವ ಮೂಲಕ, ಕೇಂದ್ರ ಸರ್ಕಾರವು ಈ ಭವನಗಳನ್ನು ಸಾರ್ವಜನಿಕರ ಹಿತಾಸಕ್ತಿಗೆ ಹೊಂದಿಕೊಳ್ಳುವಂತೆ ಮಾಡುತ್ತಿದೆ. ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ನಾಗರಿಕರು ಯಾವುದೇ ಪ್ರತ್ಯೇಕ ಅನುಮತಿಯಿಲ್ಲದೆ, ನಿರ್ದಿಷ್ಟ ಸಮಯದಲ್ಲಿ ಪ್ರವೇಶ ಪಡೆದು, ಭಾರತೀಯ ಆಡಳಿತ ಶೈಲಿ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸಬಹುದು ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ : ಸೌತ್ ಆಫ್ರಿಕಾ ಟಿ20 ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ!



















