ವಿಜಯ್ ಹಜಾರೆಯಲ್ಲಿ ಟ್ರೋಫಿಯಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ತೋರುತ್ತಿದ್ದು, 6ನೇ ಜಯ ಸಾಧಿಸಿದೆ. ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ ಕರ್ನಾಟಕ ತಂಡ 6 ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ನಾಗಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾಗಲ್ಯಾಂಡ್ ತಂಡ 206 ರನ್ ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 37.5 ಓವರ್ ಗಳಲ್ಲಿ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನಾಗಲ್ಯಾಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಿಬ್ಬರು ಬಂದಷ್ಟೇ ವೇಗವಾಗಿ ಔಟ್ ಆದರು. ಸೆದೆಝಾಲಿ ರೂಪೆರೊ ಇನ್ನಿಂಗ್ಸ್ನ ಮೊದಲ ಓವರ್ ನ ಮೊದಲ ಎಸೆತದಲ್ಲೇ ಕೌಶಿಕ್ ಗೆ ಬಲಿಯಾದರೆ, ಮತ್ತೊಬ್ಬ ಆರಂಭಿಕ ದೇಗಾ ನಿಶ್ಚಲ್ ಕೂಡ ಕೇವಲ 1 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರಾಂಗ್ಸೆನ್ ಜೊನಾಥನ್ ನಾಯಕನ ಇನ್ನಿಂಗ್ಸ್ ಆಡಿ 73 ಎಸೆತಗಳಲ್ಲಿ 51 ರನ್ ಗಳಿಸಿದರು. ಸಾಥ್ ನೀಡಿದ ಚೇತನ್ ಬಿಸ್ಟ್ ಕೂಡ 77 ರನ್ ಗಳ ಇನ್ನಿಂಗ್ಸ್ ಕಟ್ಟಿದರು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 2 ವಿಕೆಟ್ ಪಡೆದರು. ಉಳಿದವರಿಗೆ ತಲಾ ಒಂದೊಂದು ವಿಕೆಟ್ ಸಿಕ್ಕಿತು.
ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 9 ರನ್ ಆದಾಗ ಆರಂಭಿಕ ನಿಖಿನ್ ಜೋಶ್ ಔಟ್ ಆದರು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕೆವಿ ಅವಿನಾಶ್ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಮರಳಿದರು. ಇನ್ನಿಂಗ್ಸ್ ನಲ್ಲಿ 119 ಎಸೆತಗಳನ್ನು ಎದುರಿಸಿದ ಮಯಾಂಕ್ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 116 ರನ್ ಕಲೆಹಾಕಿದರೆ, ಅವಿನಾಶ್ 95 ಎಸೆತಗಳಲ್ಲಿ 10 ಬೌಂಡರಿ ಸಹಿತ 82 ರನ್ ಅಜೇಯರಾಗಿ ಉಳಿದು ಪಂದ್ಯ ಮುಗಿಸಿದರು.