ಬೆಂಗಳೂರು : ಗಣತಿದಾರರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನಕ್ಕೆ ತೆಗೆದುಕೊಂಡು ಪರಿಹರಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರ ಬರೆದಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್‌ಗೆ ಬರೆದ ಪತ್ರದಲ್ಲಿ, ಗಣತಿದಾರರಿಗೆ 250ಕ್ಕೂ ಹೆಚ್ಚು ಮನೆಗಳ ಗಣತಿ ಕಾರ್ಯ ನಿರ್ವಹಿಸಲು ಕಾರ್ಯ ಹಂಚಿಕೆ ಮಾಡಲಾಗಿದ್ದು, ಇದರ ಬದಲಾಗಿ ಪ್ರತಿ ಗಣತಿದಾರನಿಗೆ 150 ಮನೆಗಳನ್ನು ಮಾತ್ರ ಸೀಮಿತಗೊಳಿಸಬೇಕು. ಕುಟುಂಬದ ಒಟ್ಟು ಸದಸ್ಯರ ಪೈಕಿ ಕುಟುಂಬದ ಮುಖ್ಯಸ್ಥರು ಅಥವಾ ಲಭ್ಯವಿರುವ ಯಾರಾದರು ಒಬ್ಬ ಸದಸ್ಯರ ಆಧಾರ್, ಕೆ.ವೈ.ಸಿ.ಯಿಂದ ಮಾತ್ರ ಓ.ಟಿ.ಪಿ.ಯನ್ನು ಪಡೆಯುವಂತೆ ಸೂಚಿಸಬೇಕು. ವಾಸ್ತವ್ಯ ಸ್ಥಳದಿಂದ ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ 40-50 ಕಿ.ಮೀ. ದೂರದಲ್ಲಿ ಗಣತಿ ಕಾರ್ಯನಿರ್ವಹಿಸುತ್ತಿರುವ ಗಣತಿದಾರರನ್ನು ಕನಿಷ್ಠ 10 ಕಿ.ಮೀ. ವ್ಯಾಪ್ತಿಯಲ್ಲಿಯೇ ಗಣತಿ ಕಾರ್ಯಕ್ಕೆ ನಿಯೋಜಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಮಾತ್ರವಲ್ಲದೇ, ದಿನಕ್ಕೆ 20ಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಲು ನೌಕರರ ಮೇಲೆ ಒತ್ತಡ ತರುತ್ತಿದ್ದು, ಅದನ್ನು ಪರಿಗಣಿಸಿ ಒತ್ತಡ ಹೇರದಂತೆ ನೋಡಿಕೊಳ್ಳಬೇಕು. ಅನಾರೋಗ್ಯದ ಸಂಬಂಧ ವೈದ್ಯಕೀಯ ಪ್ರಮಾಣ ಪತ್ರ ಅಥವಾ ವೈದ್ಯರ ಶಿಫಾರಸ್ಸು ಪತ್ರಗಳನ್ನು ಪರಿಗಣಿಸಿ ಅಂತಹ ಅಧಿಕಾರಿ/ನೌಕರರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು. ತಂದೆ-ತಾಯಿ, ಪತಿ-ಪತ್ನಿ ಹಾಗೂ ಮಕ್ಕಳ ಅನಾರೋಗ್ಯ, ಆರೈಕೆಯ ನೋಡಿಕೊಳ್ಳುತ್ತಿರುವವರಿಗೆ, ಸಿಂಗಲ್ ಪೇರೆಂಟ್ಸ್ ಇರುವ ನೌಕರರಿಗೆ ಗಣತಿ ಕಾರ್ಯದಿಂದ ಬಿಡುಗಡೆಗೊಳಿಸಬೇಕು. ಅಷ್ಟಲ್ಲದೇ, ಗಣತಿ ಕಾರ್ಯಕ್ಕೆ ಮಾಹಿತಿ ನೀಡಲು ನಿರಾಕರಿಸುವ ಹಾಗೂ ಲಭ್ಯವಿಲ್ಲದ ಮನೆಗಳಿಗೆ ಗಣತಿದಾರರು ಒಂದು ಬಾರಿ ಮಾತ್ರ ಪುನರ್ ಸಮೀಕ್ಷೆಗೆ ಅವಕಾಶ ಕಲ್ಪಿಸಬೇಕು. ನಿರಾಕರಿಸುವ/ಲಭ್ಯವಿಲ್ಲದ ಕುಟುಂಬಗಳ ಗಣತಿ ಕಾರ್ಯದ ಗೌರವಧನವನ್ನು ಗಣತಿದಾರರಿಗೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಇನ್ನು, ಮಾಹಿತಿ ನೀಡಲು ನಿರಾಕರಿಸಿರುವ ಕುಟುಂಬಗಳ ಸಂಖ್ಯೆಯನ್ನು ಗಣತಿದಾರರ ಒಟ್ಟು ಕುಟುಂಬಗಳ ನಿಗದಿಪಡಿಸಿರುವ ಸಂಖ್ಯೆಯನ್ನು ಸಹ ಸಮೀಕ್ಷೆ ಪೂರ್ಣಗೊಂಡಿರುವ ಸಂಖ್ಯೆಗೆ ಆಪ್ ನಲ್ಲಿಯೇ ಸೇರ್ಪಡೆಗೊಳಿಸಬೇಕು. ಗಣತಿ ಕಾರ್ಯಕ್ಕೆ ಕುಟುಂಬದ ಸದಸ್ಯರು ನೀಡಬಹುದಾದ ಮಾಹಿತಿಗಳ ಬಗ್ಗೆ ಮತ್ತು ಗಣತಿದಾರರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಹೊರರಾಜ್ಯ/ಹೊರ ದೇಶಗಳಿಂದ ರಾಜ್ಯದಲ್ಲಿ ವಾಸ್ತವ್ಯವಿರುವ ಕುಟುಂಬಗಳನ್ನು ಗಣತಿಗೆ ಪರಿಗಣಿಸಬೇಕೆ ಎನ್ನುವುದರ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಬಹುಮಹಡಿ ಕಟ್ಟಡಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಗಣತಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸಾರ್ವತ್ರಿಕ ರಜಾ ದಿನಗಳಂದು ಗಣತಿ ಕಾರ್ಯ ನಿರ್ವಹಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಮನವಿಯಲ್ಲಿ ಹೇಳಿದ್ದಲ್ಲದೇ, ಗಣತಿದಾರರು ಗಣತಿಗಾಗಿ ಬಳಸುತ್ತಿರುವ ಮೊಬೈಲ್ ಆಪ್ ನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಸೂಚನೆ ನೀಡಿದೆ.


