ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಲು ದೆಹಲಿಗೆ ತೆರಳಿದ್ದ ಭಿನ್ನರ ಗುಂಪು ಈಗ ಥಂಡಾ ಹೊಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ಬಂಡಾಯ ನಾಯಕರನ್ನು ದೆಹಲಿಯಲ್ಲಿ ಯಾವೊಬ್ಬ ರಾಷ್ಟ್ರೀಯ ನಾಯಕರೂ ಭೇಟಿಯಾಗದ ಕಾರಣ ಅವರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಬಿಜೆಪಿಯ ಭಿನ್ನಮತ ಶಮನ ಮಾಡಲು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ಕರ್ನಾಟಕಕ್ಕೆ ಆಗಮಿಸಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
ಕರ್ನಾಟಕ ಬಿಜೆಪಿ ಆಂತರಿಕ ಕಿತ್ತಾಟ ಜಾಸ್ತಿಯಾದ ಹಿನ್ನೆಲೆಯಲ್ಲಿ ಸುಧಾಕರ್ ರೆಡ್ಡಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಕರ್ನಾಟಕಕ್ಕೆ ಆಗಮಿಸುತ್ತಲೇ ಅವರು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಸಭೆ ನಡೆಸಿ, ಪಕ್ಷದಲ್ಲಾಗುತ್ತಿರುವ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾತನಾಡಿದ ಸುಧಾಕರ್ ರೆಡ್ಡಿ ಅವರು ಎಲ್ಲರಿಗೂ ಎಚ್ಚರಿಕೆಯ ಪಾಠ ಮಾಡಿದರು. ಬಿಜೆಪಿಯಲ್ಲಿ ಯಾವುದೇ ಸಮಸ್ಯೆ, ಬಿಕ್ಕಟ್ಟು ಎದುರಾದರೂ ಅದನ್ನು ಬಗೆಹರಿಸುವ ಸಮರ್ಥ ನಾಯಕತ್ವ ಇದೆ. ನಾನು ಪ್ರತಿಯೊಬ್ಬರಿಗೂ ಒಂದೇ ಮಾತನ್ನು ಹೇಳುತ್ತೇನೆ. ಒಬ್ಬರಿಗೊಬ್ಬರು ಗೌರವ ಕೊಡಿ, ಪಕ್ಷದಲ್ಲಿ ಶಾಂತಿ ಕಾಪಾಡಿಕೊಳ್ಳಿ. ಆ ಮೂಲಕ ಕಾರ್ಯಕರ್ತರನ್ನು ಕೂಡ ಒಗ್ಗೂಡಿಸಿಕೊಂಡು ಹೋಗಿ ಎಂದಷ್ಟೇ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಇದರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗೆ ಸುಧಾಕರ್ ರೆಡ್ಡಿ ಅವರು ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ. ದೆಹಲಿ ನಾಯಕರಿಗೆ ವಿಜಯೇಂದ್ರ ಬಗ್ಗೆ ದೂರು ನೀಡಲು ಹೋದವರು ನಾಯಕರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸಾದ ಬಳಿಕ ಥಂಡಾ ಹೊಡೆದಿದ್ದಾರೆ. ಈಗ ಸುಧಾಕರ್ ರೆಡ್ಡಿ ಅವರೂ ರಾಜ್ಯಕ್ಕೆ ಆಗಮಿಸಿರುವ ಕಾರಣ ಎಲ್ಲ ನಾಯಕರು ಆರೋಪ-ಪ್ರತ್ಯಾರೋಪಗಳಿಗೆ ವಿದಾಯ ಹೇಳಿದ್ದಾರೆ.